ರೈತರೊಂದಿಗೆ ಸಂವಾದ ನಡೆಸಿದ ಡಾ. ಪ್ರಭಾಕರ ಕೋರೆ
Dr. Prabhakar Kore interacted with farmers
ಕಾಗವಾಡ 25 : ಶಿವಶಕ್ತಿ ಶುಗರ್ಸ್ ವತಿಯಿಂದ ಕಾಗವಾಡ ತಾಲೂಕಿನ ಐನಾಪುರದಲ್ಲಿ ಆಯೋಜಿಸಲಾಗಿದ್ದ ರೈತ ಸಮಾಲೋಚನಾ ಸಭೆಯಲ್ಲಿ ಕಾಹೇರ್ ಕುಲಾಧಿಪತಿ, ಪದ್ಮಶ್ರೀ ಡಾ. ಪ್ರಭಾಕರ ಬಿ. ಕೋರೆ ಅವರು ಭಾಗವಹಿಸಿ ರೈತರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೃಷಿಯ ಅಭಿವೃದ್ಧಿಗೆ ಕೆಎಲ್‌ಇ ಸಂಸ್ಥೆ ನಿರಂತರವಾಗಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು. ಬೆಳಗಾವಿಯ ಮತ್ತಿಕೊಪ್ಪದಲ್ಲಿರುವ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಮೂಲಕ ರೈತರಿಗೆ ಆಧುನಿಕ ಕೃಷಿ ಪದ್ಧತಿಗಳ ಕುರಿತು ವೈಜ್ಞಾನಿಕ ತರಬೇತಿ ನೀಡಲಾಗುತ್ತಿದೆ. ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ, ಮಣ್ಣಿನ ಆರೋಗ್ಯ, ನೀರಿನ ಸಮರ್ಕ ಬಳಕೆ, ಬೆಳೆ ಸಂರಕ್ಷಣೆ ಹಾಗೂ ಸುಧಾರಿತ ಕೃಷಿ ತಂತ್ರಜ್ಞಾನಗಳ ಕುರಿತು ರೈತರಿಗೆ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು. ತರಬೇತಿಗಾಗಿ ಆಗಮಿಸುವ ರೈತರಿಗೆ ಕೇಂದ್ರದಲ್ಲಿ ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರೈತ ಕುಟುಂಬಗಳ ಮಕ್ಕಳ ಉನ್ನತ ಶಿಕ್ಷಣಕ್ಕೂ ಕೆಎಲ್‌ಇ ಸಂಸ್ಥೆ ಆದ್ಯತೆ ನೀಡಿದ್ದು, ತೆನಿಕೊಳ್ಳದಲ್ಲಿ ಬಿ.ಎಸ್ಸಿ. ಕೃಷಿ ಮಹಾವಿದ್ಯಾಲಯವನ್ನು ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕೃಷಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಕೃಷಿಯಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಂಡಾಗ ಮಾತ್ರ ಉತ್ಪಾದನೆ ಹಾಗೂ ಆದಾಯ ಎರಡನ್ನೂ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ರೈತರು ತಮ್ಮ ಸಮಸ್ಯೆಗಳು, ನೀರಾವರಿ, ಬೆಳೆ ವಿಮೆ, ಮಾರುಕಟ್ಟೆ ವ್ಯವಸ್ಥೆ, ಉತ್ಪಾದನಾ ವೆಚ್ಚ ಹಾಗೂ ತಾಂತ್ರಿಕ ಮಾರ್ಗದರ್ಶನ ಸೇರಿದಂತೆ ವಿವಿಧ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಡಾ. ಕೋರೆ ಅವರು ರೈತರ ಸಮಸ್ಯೆಗಳನ್ನು ಆಲಿಸಿ, ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಹಾಗೂ ಸಂಶೋಧನೆಯ ಫಲಿತಾಂಶಗಳನ್ನು ರೈತರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ 