ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ಡಾ. ಮಹಾಂತೇಶ್ ಕಿವುಡಸಣ್ಣನವರ್‌ರ 55ನೇ ಜನ್ಮದಿನ ಆಚರಣೆ

ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ಡಾ. ಮಹಾಂತೇಶ್ ಕಿವುಡಸಣ್ಣನವರ್‌ರ 55ನೇ ಜನ್ಮದಿನ ಆಚರಣೆ  Dr. Mahantesh Kivudasannavar's 55th birthday celebration

ಬೆಳಗಾವಿ 28: ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಳಗಾವಿ ಶಾಖೆಯಲ್ಲಿ ಇಂದು ಸಂಸ್ಥೆಯ ಸ್ಥಾಪಕರಾದ ಸಮಾಜಸೇವಕ, ದೃಷ್ಟಿಹೀನರ ಪ್ರೇರಣಾ ದೀಪ ಹಾಗೂ ಅಂತರರಾಷ್ಟ್ರೀಯ ಮಟ್ಟದ ನಾಯಕ ಡಾ. ಮಹಾಂತೇಶ್ ಕಿವುಡಸಣ್ಣನವರ್ ಅವರ 55ನೇ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 

ಡಾ. ಮಹಾಂತೇಶ್ ಕಿವುಡಸಣ್ಣನವರ್ ರವರು ಗಟ್ಟಿವಾಳಪ್ಪ ಹಾಗೂ ವಿದ್ಯಾದೇವಿ ಕಿವುಡಸಣ್ಣನವರ್ ಅವರ ಪ್ರಥಮ ಸುಪುತ್ರರಾಗಿ 28 ಸೆಪ್ಟೆಂಬರ್ 1970ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನೇಗಿನಹಾಳ ಗ್ರಾಮದಲ್ಲಿ ಜನಿಸಿದರು. ಜನನದ ಬಳಿಕ ದೃಷ್ಟಿಹೀನರಾಗಿದ್ದರೂ, ಆ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ವಿಶೇಷ ಶಾಲೆಗಳು ಲಭ್ಯವಿರಲಿಲ್ಲದ ಕಾರಣ, ಅವರ ಪೋಷಕರು ಅವರನ್ನು ಬೆಂಗಳೂರಿನ ಪ್ರಸಿದ್ಧ ಶಾಲೆಗೆ ಕಳುಹಿಸಿ ಶಿಕ್ಷಣವನ್ನು ಮುಂದುವರಿಸಿದರು. ಅಂದಿನಿಂದಲೇ ಅವರು ಜೀವನದಲ್ಲಿ ಹಿಂದೆ ನೋಡದೆ ನಿರಂತರ ಪ್ರಗತಿಪಥದಲ್ಲಿ ಸಾಗಿದರು. 

ಅವರು ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಮಹಾವಿದ್ಯಾಲಯದ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿ, ಎಂ.ಫಿಲ್ (ಇಂಗ್ಲೀಷ್) ಪದವಿಯನ್ನು ಪಡೆದರು. ನಂತರ ಒಂದು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಆದರೆ ಅವರ ಹೃದಯದಲ್ಲಿದ್ದ ಕನಸು ಸಮಾಜಸೇವೆ ಮತ್ತು ಅಂಗವಿಕಲರಿಗೆ ಬೆಳಕಾಗಬೇಕೆಂಬುದು. ಈ ಕನಸನ್ನು ಸಾಕಾರಗೊಳಿಸಲು, 26 ಫೆಬ್ರವರಿ 1997ರಂದು ಇಬ್ಬರು ಸಮಮಿತ್ರರೊಂದಿಗೆ ಸೇರಿ ಸಮರ್ಥನಂ ಅಂಗವಿಕಲರ ಸಂಸ್ಥೆ ಸ್ಥಾಪಿಸಿದರು. 

ಇಂದು ಸಮರ್ಥನಂ ಅಂಗವಿಕಲರ ಸಂಸ್ಥೆ ಭಾರತದೆಲ್ಲೆಡೆ 22ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಶಿಕ್ಷಣ, ಉದ್ಯೋಗ, ಕ್ರೀಡೆ, ಕಲಾ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಲಕ್ಷಾಂತರ ಅಂಗವಿಕಲರ ಬದುಕಿಗೆ ಬೆಳಕಾಗಿದೆ. ಅಂಧರ ಕ್ರಿಕೆಟ್ ಸೇರಿದಂತೆ ಅನೇಕ ಕ್ರೀಡಾ ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ವೇದಿಕೆಯನ್ನು ಒದಗಿಸಿರುವುದು ಹೆಮ್ಮೆಯ ಸಂಗತಿ. 

ಈ ವರ್ಷ ಬೆಳಗಾವಿ ನಗರದ ಜೀಜಾಮಾತಾ ಶಾಲೆಯ ಆವರಣದಲ್ಲಿ ನಡೆದ ಜನ್ಮದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

ಕಾರ್ಯಕ್ರಮದಲ್ಲಿ ಸಮಾಜಸೇವಕ ಹಾಗೂ ಸಮರ್ಥನಂ ಸಂಸ್ಥೆಯ ಹಿತಚಿಂತಕ ಅನಿಲ್ ಮೂಡಲಗಿ ಅವರು ಭಾಗವಹಿಸಿ ಮಾತನಾಡುತ್ತಾ ಸಮರ್ಥನಂ ಅಂಗವಿಕಲರ ಸಂಸ್ಥೆ ದೇಶ-ವಿದೇಶಗಳಲ್ಲಿ ಅತ್ಯುನ್ನತ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರ. ನಾನು ವ್ಯಕ್ತಿಗತವಾಗಿ ಮಹಾಂತೇಶ್ ಜಿ.ಕೆ. ಅವರೊಂದಿಗೆ ಸಂಪರ್ಕದಲ್ಲಿದ್ದು, ಅವರ ವಿರಳ ವ್ಯಕ್ತಿತ್ವ ಹಾಗೂ ಸೇವಾಭಾವ ಅಪರೂಪದದ್ದು ಎಂದು ಪ್ರಶಂಸಿಸಿದರು. 

ಸಮರ್ಥನಂ ಬೆಳಗಾವಿ ಶಾಖಾ ಮುಖ್ಯಸ್ಥ ಅರುಣ್ ಕುಮಾರ್ ಎಂ.ಜಿ. ಅವರು ಮಕ್ಕಳಿಗೆ ಡಾ. ಮಹಾಂತೇಶ್ ಜಿ.ಕೆ. ಅವರ ಜೀವನ ಪಯಣ ಮತ್ತು ಸಾಧನೆಗಳ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಅವರ ಮಾತುಗಳು ಮಕ್ಕಳು ಸಮಾಜಸೇವಾ ಮನೋಭಾವ, ದೃಢ ಸಂಕಲ್ಪ ಮತ್ತು ಶ್ರಮದ ಮಹತ್ವವನ್ನು ತಿಳಿಸಿದವು. 

ವಿವಿಧ ಯೋಜನೆಗಳ ಪದಾಧಿಕಾರಿಗಳು, ಸಮರ್ಥನಂ ಸಂಸ್ಥೆಯ ಸಿಬ್ಬಂದಿಗಳು, ನೂರಾರು ಅಂಧ ಹಾಗೂ ದೈಹಿಕ ವಿಕಲಚೇತನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಸಾಮಾನ್ಯ ವಿದ್ಯಾರ್ಥಿಗಳು ಹಾಜರಿದ್ದು, ಡಾ. ಮಹಾಂತೇಶ್ ಅವರ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು. 

ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಲ್ಲರೂ ಡಾ. ಮಹಾಂತೇಶ್ ಕಿವುಡಸಣ್ಣನವರ್ ಅವರಿಗೆ ದೀರ್ಘಾಯುಷ್ಯ, ಆರೋಗ್ಯ ಹಾಗೂ ಶಕ್ತಿ ದೊರಕಲಿ ಎಂದು ಹಾರೈಸಿದರು.