ಸಚಿವ ತಿಮ್ಮಾಪುರ ಚರಿತ್ರೆಗೆ ಮಸಿ ಬಳಿಯುವ ಕೆಲಸ ಮಾಡಬೇಡಿ: ಮನ್ನಿಕೇರಿ

ಸಚಿವ ತಿಮ್ಮಾಪುರ ಚರಿತ್ರೆಗೆ ಮಸಿ ಬಳಿಯುವ ಕೆಲಸ ಮಾಡಬೇಡಿ: ಮನ್ನಿಕೇರಿ  Don't tarnish the history of Minister Thimmapura: Mannikeri

ಲೋಕದರ್ಶನ ವರದಿ 

ಮಹಾಲಿಂಗಪುರ 07: ಉಸ್ತುವಾರಿ ಸಚಿವರಾದ ಆರ್‌. ಬಿ. ತಿಮ್ಮಾಪುರ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಕಾಲ ರಾಜಕೀಯ ರಂಗದಲ್ಲಿರುವ, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಶುದ್ಧ ಹಸ್ತರಾಗಿರುವ ಇವರ ಚರಿತ್ರೆಗೆ ಮಸಿ ಬಳಿಯುವ ಕೆಲಸವನ್ನು ವಿರೋಧ ಪಕ್ಷದ ಭಾಜಪ ಮುಖಂಡರು ಮಾಡುತ್ತಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧ್ಯಕ್ಷ ರಾಜು ಮನ್ನಿಕೇರಿಯವರು ಹೇಳಿದರು.  

ರಾಜ್ಯದಲ್ಲಿ ಅಬಕಾರಿ ಸಚಿವರಾದ ಆರ್‌. ಬಿ. ತಿಮ್ಮಪೂರ ಅಂದಾಜು 2.5 ಸಾವಿರ ಕೋಟಿ ಬೇನಾಮಿಯಾಗಿ ಹಣ ಪಡೆದಿದ್ದಾರೆ ಎಂಬ ವಿರೋಧ ಪಕ್ಷದ ಗುಲ್ಲಿಗೆ ತಿರುಗೇಟು ನೀಡಲು ಪಟ್ಟಣದ ದಲಿತ ಸಮಾಜದ ಮುಖಂಡರ ಹಾಗೂ ಜನತೆಯ ಜೊತೆಗೂಡಿ ಸ್ಥಳೀಯ ಜಿ. ಎಲ್‌. ಬಿ. ಸಿ ಅತಿಥಿ ಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. 

ತಾವೇ ಸ್ವತಃ ಭ್ರಷ್ಟಾಚಾರದ ಮನೆಯಲ್ಲಿ ಹುಟ್ಟಿದ್ದು ತಂದೆ ಮಾಜಿ ಮುಖ್ಯಮಂತ್ರಿ ಯಡಿಯೂರ​‍್ಪ ಜೈಲಿಗೆ ಹೋಗಿ ಬಂದಿರುವುದು ಮತ್ತು ಅಂದಿನ ಭಾಜಪ ಸರ್ಕಾರದ 15 ಜನ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿರುವ ಇತಿಹಾಸ ವಿರೋಧ ಪಕ್ಷದ ನಾಯಕ ವಿಜೇಂದ್ರರ ಗಮನಕ್ಕಿದ್ದರೂ ಮರೆಮಾಚುವ ಕೆಲಸ ಮಾಡುತ್ತಿದ್ದಾರೆ, ನಾವು ಇದಕ್ಕೆ ಪುರಾವೆ ಸಮೇತವಾಗಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ.  

ಈ ವಿಷಯ ಕುರಿತು ತಮ್ಮಲ್ಲಿ ರಾಜಕೀಯ ನೈತಿಕತೆ ಏನಾದರೂ ಇದ್ದರೆ ತಕ್ಷಣ ರಾಜಕೀಯದಿಂದ ನಿವೃತ್ತಿ ಹೊಂದುತ್ತೀರಾ ? ಅಥವಾ ಉಸ್ತುವಾರಿ ಸಚಿವರ ಬಗ್ಗೆ ತಮ್ಮಲ್ಲೇನಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಿ, ಇದಕ್ಕೆ ಜವಾಬ್ದಾರಿ ಹೊತ್ತು ಸಚಿವರು ಮತ್ತು ನಾವು ರಾಜೀನಾಮೆ ನೀಡಲು ಕಟಿ ಬದ್ಧರಾಗಿದ್ದೇವೆ, ತಾವೇನಾದರೂ ಬರುವವರಿದ್ದರೆ ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ ಚರ್ಚಾ ವೇದಿಕೆ ನಿರ್ಮಾಣ ಮಾಡುತ್ತೇವೆ ಬನ್ನಿ ಮುಖಾಮುಖಿ ಆಗೋನ ಎಂದು ಬಹಿರಂಗ ಸವಾಲು ಹಾಕಿದರು. 

ಕಾಂಗ್ರೆಸ್ ಮತ್ತು ಸಮುದಾಯದ ಮುಖಂಡರಾದ ಅರ್ಜುನ್ ದೊಡಮನಿ, ವಿಠ್ಠಲ ಹೊಸಮನಿ, ಪರಶುರಾಮ ಮೇತ್ರಿ ಮತ್ತು ಮಲ್ಲಪ್ಪ ಗಿರೆವ್ವಗೋಳ ಮಾತನಾಡಿ, ದಲಿತರು, ಹಿಂದುಳಿದವರು ಸಾಮಾಜಿಕವಾಗಿ ಮುಂದು ಬಂದರೆ ಭಾಜಪದ ಜನರಿಗೆ ಹೊಟ್ಟೆ ಉರಿ. ಇವತ್ತು ಬಡತನದಿಂದ ಬಂದು ಸಚಿವರಾಗಿರುವ ತಿಮ್ಮಾಪುರ ಅವರನ್ನು ಹೇಗಾದರೂ ಮಾಡಿ ಕೆಳಗಿಳಿಸಬೇಕು ಎಂಬ ಹುಣ್ಣಾರ ನಡೆದಿದ್ದು, ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ಸಂವಿಧಾನಬದ್ಧವಾಗಿ ತಮ್ಮಲ್ಲಿ ಏನಾದರೂ ದಾಖಲೆಗಳಿದ್ದರೆ ತೆಗೆದುಕೊಂಡು ಬನ್ನಿ ಚರ್ಚಿಸೋಣ ವಿನಾಕಾರಣ ನಮ್ಮ ಸಮುದಾಯದ ಸಚಿವರ ಮೇಲೆ ಮೇಲಿನ ಮೇಲೆ ಸುಳ್ಳು ಆಪಾದನೆಗಳನ್ನು ಮಾಡುತ್ತಾ ಕುಳಿತರೆ ನಾವೆಲ್ಲ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಭಾಜಪ ಕಚೇರಿಗಳಿಗೆ ಘೇರಾವ್ ಹಾಕುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಎಸ್‌.ಸಿ.-ಎಸ್ ಟಿ ಜಿಲ್ಲಾ ಜನರಲ್ ಸೆಕ್ರೆಟರಿ ಪ್ರಭು ರುದ್ರಾಕ್ಷಿ,,ಲಕ್ಷ್ಮಣ ಮಾಂಗ, ಬಸವರಾಜ ಮಾವಿನಹಿಂಡಿ,ಶೇಖರ ಉತ್ತೂರ,ಲಗಮನ್ನ ಪೂಜೇರಿ, ಶ್ರೀಶೈಲ ದೊಡಮನಿ, ರಮೇಶ್ ಮಾಂಗ, ಶಶಿಕಾಂತ ಮುಖ್ಯೆನ್ನವರ,ಲಕ್ಷ್ಮಣ ದೊಡಮನಿ, ಸಂದೀಪ ದೊಡಮನಿ, ಮಹಾಲಿಂಗಪ್ಪ ಹಲಸಪ್ಪಗೋಳ, ಮಹಾಲಿಂಗಪ್ಪ ಪೂಜೇರಿ ಇದ್ದರು.