ವಾಸ್ತವ ತಿಳಿಯದೆ ರಾಜಕೀಯ ಮಾಡಬೇಡಿ

ವಾಸ್ತವ ತಿಳಿಯದೆ ರಾಜಕೀಯ ಮಾಡಬೇಡಿ Don't do politics without knowing the facts


ಬೆಂಗಳೂರು: ಯಲಹಂಕದ ಕೋಗಿಲು ಗ್ರಾಮದಲ್ಲಿನ ಫಕೀರ್ಕಾಲೋನಿ ಮತ್ತು ವಸೀಮ್ ಲೇಔಟ್ ನಲ್ಲಿ ಅಕ್ರಮವಾಗಿ ವಾಸವಾಗಿದ್ದವರನ್ನು ತೆರವು ಗೊಳಿಸಿರುವ ವಿರುದ್ಧ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ''ವಾಸ್ತವ ತಿಳಿಯದೆ ವಿಚಾರದಲ್ಲಿ ಮಧ್ಯಪ್ರವೇಶಿಸಬೇಡಿ. ಹಿರಿಯರಾದ ಪಿಣರಾಯಿ ವಿಜಯನ್ ಅವರ ಹೇಳಿಕೆ ದುರದೃಷ್ಟಕರ, ಹೊರಗಿನವರು ರಾಜಕೀಯ ಹೇಳಿಕೆ ನೀಡುವ ಮೊದಲು ಬೆಂಗಳೂರಿನ ವಾಸ್ತವಗಳನ್ನು ಅರಿತುಕೊಳ್ಳಬೇಕು. ಸರಕಾರಿ ಜಾಗವನ್ನು ಒತ್ತುವರಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಸರಕಾರದ ಜಾಗದಲ್ಲಿ ಅಕ್ರಮ ಸ್ಲಂ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಸರಕಾರದ ಭೂಮಿಯನ್ನು ರಕ್ಷಿಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ'' ಎಂದು ಹೇಳಿದ್ದಾರೆ.

ತೆರವು ಮಾಡಲಾದ ಸ್ಥಳ ಅತಿಕ್ರಮಣಗೊಂಡ ತ್ಯಾಜ್ಯ ವಿಲೇವಾರಿ ಸ್ಥಳ. ಲ್ಯಾಂಡ್ ಮಾಫಿಯಾದವರು ಅದನ್ನು ಸ್ಲಂ ಆಗಿ ಪರಿವರ್ತಿಸಲು ಹುನ್ನಾರ ಮಾಡಿದ್ದಾರೆ ಎಂದರು.

'ನಮಗೆ ಮಾನವೀಯತೆ ಇದೆ. ನಾವು ಅವರಿಗೆ ಬೇರೆ ಸ್ಥಳಗಳಿಗೆ ತೆರಳುವಂತೆ ಅವಕಾಶ ನೀಡಿದ್ದೆವು.ಅವರಲ್ಲಿ ಕೆಲವೇ ಮಂದಿ ಸ್ಥಳೀಯರುನಾವು ಬುಲ್ಡೋಜರ್ ರಾಜಕಾರಣ ಮಾಡುವುದಿಲ್ಲ. ಕಾನೂನು ಪ್ರಕಾರವೇ ತೆರವು ಕಾರ್ಯ ಮಾಡಲಾಗಿದೆ'ಎಂದು ಡಿಸಿಎಂ ತಿರುಗೇಟು ನೀಡಿದ್ದಾರೆ.

ಅಕ್ರಮವಾಗಿ ವಾಸಿಸುತ್ತಿದ್ದವರಲ್ಲಿ ಬಹುತೇಕರು ಮುಸ್ಲಿಂ ಸಮುದಾಯದವರಾಗಿದ್ದಾರೆ. ಮುಸ್ಲಿಮರ ಮನೆಗಳ ತೆರವು ವಿಚಾರ ರಾಜಕೀಯವಾಗಿ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಡಿ.ಕೆ. ಶಿವಕುಮಾರ್ ವಿವರವಾದ ವರದಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಬಿಎಂಪಿಗೆ ಸೇರಿದ 5 ಎಕರೆ ಜಾಗ ಅಕ್ರಮವಾಗಿ ಒತ್ತುವರಿ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಲಾಗಿದೆ. ಅಕ್ರಮ ಮನೆಗಳ ತೆರವು ಕಾನೂನುಬದ್ಧವಾಗಿ ಮಾಡಲಾಗಿದೆ ಎಂದು ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.

ಫೇಸ್ಬುಕ್ನಲ್ಲಿ "ಕರ್ನಾ­ಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದರೂ ಬುಲ್ಡೋ­ಜರ್ನ್ಯಾಯ ಜಾರಿಯಾಗಿರುವುದು ನನ್ನನ್ನು ಅಚ್ಚರಿಗೆ ದೂಡಿದೆ' ಎಂದಿರುವ ಅವರು, "ಸಾಮಾಜಿಕ ನ್ಯಾಯದ ಪರ ಎಂದು ಹೇಳಿಕೊಳ್ಳುವ ಪಕ್ಷವು ಇಂತಹ ಬಲವಂತದ ಒಕ್ಕಲೆ­ಬ್ಬಿ­ಸುವಿಕೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ' ಎಂದು ಪ್ರಶ್ನಿಸಿದ್ದಾರೆ.

ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ರಾಜಕೀಯವು ದಕ್ಷಿಣ ಭಾರತಕ್ಕೂ ಹರಡುತ್ತಿದೆ ಎಂದು ಎಚ್ಚರಿಸಿದ ವಿಜಯನ್, ವಿಪರೀತ ಚಳಿಯಿದ್ದರೂ ಜನರನ್ನು ಬಲವಂತವಾಗಿ ಬೀದಿಗೆ ತಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಡವರನ್ನು ರಕ್ಷಿಸುವುದು, ಆಶ್ರಯ ಕಲ್ಪಿಸುವುದು, ಬಲಪ್ರಯೋಗದ ಮೂಲಕ ಜನರನ್ನು ಮನೆಯಿಂದ ಹೊರಹಾಕದಂತೆ ತಡೆಯುವುದು ಸರ್ಕಾ ರಗಳ ಜವಾಬ್ದಾರಿಯಾಗಬೇಕು ಎಂದು ವಿಜಯನ್ ಪೋಸ್ಟ್ ಮಾಡಿದ್ದರು.