ಪೌರಕಾರ್ಮಿಕರಿಗೆ ತಾರತಮ್ಯದಿಂದ ನೋಡದಿರಿ: ಸಂಜು ಕಂಬಾಗಿ

ಪೌರಕಾರ್ಮಿಕರಿಗೆ ತಾರತಮ್ಯದಿಂದ ನೋಡದಿರಿ: ಸಂಜು ಕಂಬಾಗಿ Don't discriminate against civil servants: Sanju Kambagi

ವಿಜಯಪುರ  23: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ)  ಜಿಲ್ಲಾ ಸಮಿತಿ ಹಾಗೂ ಮಹಾ ನಗರ ಪಾಲಿಕೆಯ ವಾಹನ ಚಾಲಕರು ನಿರ್ವಾಹಕರು ಕ್ಷೇಮಾಭಿವೃದ್ಧಿ ಸಂಘ ಸಂಯುಕ್ತಾಶ್ರಯದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರವರ ವೃತ್ತದಲ್ಲಿ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್‌ವಾದ ಬೆಳಗಾವಿ ವಿಭಾಗೀಯ ಸಂಚಾಲಕರಾದ ಸಂಜು ವೈ. ಕಂಬಾಗಿ ಮಾತನಾಡಿ, ಪೌರಕಾರ್ಮಿಕರು ಈ ದೇಶದ ಸ್ವತ್ತು, ಇಲ್ಲಿ ಎರಡು ವರ್ಗಗಳು ಬರುತ್ತವೆ ಒಂದು ಆಡಳಿತ ವರ್ಗ ಇನ್ನೊಂದು ದುಡಿಯುವ ವರ್ಗ ಈ ಎರಡರಲ್ಲಿ ಸಂಘರ್ಷಗಳು ಉಂಟಾಗುತ್ತಲಿವೆ. ಆಡಳಿತ ವರ್ಗ ದುಡಿಯುವ ವರ್ಗವನ್ನು ಬೇರೆ ದೃಷ್ಠಿಕೋಣದಿಂದ ನೋಡುತ್ತಿದೆ.  

ಅದನ್ನು ಬಿಟ್ಟು ಅವರು ನಮ್ಮಂತೆ ಮನುಷ್ಯರು ಅಂತಾ ತಿಳಿದು ಅವರಿಗೆ ಸಿಗಬೇಕಾದಂತಹ ಮೂಲಭೂತ ಸೌಲಭ್ಯಗಳು ದೊರೆತಾಗ ಮಾತ್ರ ಪೌರಕಾರ್ಮಿಕ ದಿನಾಚರಣೆ ಆಚರಣೆ ಮಾಡುವುದು ಸೂಕ್ತವಾಗುತ್ತದೆ. ಕಾಟಾಚಾರಕ್ಕೆ ಪೌರಕಾರ್ಮಿಕರ ದಿನಾಚರಣೆ ಮಾಡಿ ಕಾರ್ಮಿಕರನ್ನು ಗುಲಾಮರಂತೆ ಕಾಣುವ ಮನಸ್ಥಿತಿಯಿಂದ ಹೊರಬರಬೇಕಾಗಿದೆ. ಹಾಗಾಗಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಪೌರ ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದರು. ಅವರು ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಅವರೇ ಕಾರ್ಮಿಕ ಸಚಿವರಾಗಿದ್ದಾಗ ಕರ್ನಾಟಕ ರಾಜ್ಯದ ಕೋಲ್ಹಾರ ಜಿಲ್ಲೆಗೆ ಬಂಗಾರ ತಗೆಯುವಂತಹ ಗಣಿಗೆ ಭೇಟಿ ನೀಡಿದ್ದಾಗ 320 ಅಡಿ ಆಳದ ಗಣಿಯನ್ನು ನೋಡಿ ಅಲ್ಲೇನಿದೆ? ಅನ್ನು ಕುತೂಹಲ ಬಾಬಾ ಸಾಹೇಬರದಾಗಿರುತ್ತದೆ.  

ಆದರೆ ಅವರ ಪಿಎ ಸರ್ ನಾವು ಇಲ್ಲಿಂದ ನಿಮಗೆಲ್ಲ ಮಾಹಿತಿಯನ್ನು ಕೊಡುತ್ತೇವೆ ಎಂದು ಬಾಬಾ ಸಾಹೇಬರನ್ನು ಕೇಳಿಕೊಳ್ಳುತ್ತಾರೆ. ಆದರೆ ಒಪ್ಪದೇ ಬಾಬಾ ಸಾಹೇಬರು ತಾವೇ 320 ಅಡಿ ಕೆಳಗೆ ಇಳಿದು ಅಲ್ಲಿರುವ ಕಾರ್ಮಿಕರ ಸಮಸ್ಯೆಯನ್ನು ಆಲಿಸಿ ಅಲ್ಲಿ ಒಬ್ಬ ಗರ್ಭಿಣಿ ಮಹಿಳೆಯನ್ನು ಭೇಟಿಯಾಗಿ ಅವಳ ಕಷ್ಟವನ್ನು ಅರಿತುಕೊಂಡು ಅವಾಗ ಕಾರ್ಮಿಕರ 12 ತಾಸು ಕೆಲಸವನ್ನು 8 ತಾಸಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ವೇತನ ಸಹಿತ 6 ತಿಂಗಳ ರಜೆಯನ್ನು ಘೋಷಣೆ ಮಾಡುತ್ತಾರೆ. ಹಾಗಾಗಿ ವಿಜಯಪುರ ಜಿಲ್ಲೆಯ ಮಹಾನಗರ ಪಾಲಿಕೆಯ ಎಲ್ಲ ಕಾರ್ಮಿಕರ ಸಮಾನ ಕೆಲಸಕ್ಕೆ ಸಮಾನ ವೇತನ ನೇರ ನೇಮಕಾತಿ ಹಾಗೂ ನೇರ ಪಾವತಿ ಮಾಡುವುದರ ಮೂಲಕ ಮಹಾನಗರ ಪಾಲಿಕೆಯ ಆಯುಕ್ತರು, ಸಚಿವರು, ಶಾಸಕರು, ಜಿಲ್ಲಾಡಳಿತ ಅಧಿಕಾರಿಗಳು ಪೌರಕಾರ್ಮಿಕರ ದಿನಾಚರಣೆ ಆಚರಿಸುವುದು ಸೂಕ್ತಕರವಾಗುವುದೆಂದು ಹೇಳಿದರು.  

ಈ ಸಂದರ್ಭದಲ್ಲಿ ನಗರ ಸಂಚಾಲಕ ಶಂಕರ ಚಲವಾದಿ, ಮಹಿಳಾ ಸಂಚಾಲಕಿ ಸವಿತಾ ವಗ್ಗರ, ಶ್ರೀಮಂತ ಪವಾರ, ವಿಜಯಕುಮಾರ ಮೇತ್ರಿ, ನಬಿಲಾಲ, ಯಲ್ಲಪ್ಪ ಚೋಡೇಕರ, ಸದಾಶಿವ ಚಲವಾದಿ, ಹುಸೇನ ರಣದೇವಿ, ನಾಗರಾಜ ಕಾಂಬಳೆ, ಶ್ರೀಶೈಲ ಹೊಸಮನಿ, ಸಿದ್ದು ಪೂಜಾರಿ ಮುಂತಾದವರು ಇದ್ದರು.