ಬುದ್ದನ ತತ್ವ, ಸಿದ್ಧಾಂತಗಳು ಇಂದಿಗೂ ಪ್ರಸ್ತುತ: ಅಪರ ಜಿಲ್ಲಾಧಿಕಾರಿಗಳಾದ ಡಾ. ಓದ್ರಾಮ ಹೇಳಿಕೆ

ಬುದ್ದನ ತತ್ವ, ಸಿದ್ಧಾಂತಗಳು ಇಂದಿಗೂ ಪ್ರಸ್ತುತ: ಅಪರ ಜಿಲ್ಲಾಧಿಕಾರಿಗಳಾದ ಡಾ. ಓದ್ರಾಮ ಹೇಳಿಕೆ District administration celebrates Lord Buddha Jayanti on a grand scale at Sariputra Buddha Vihara

ಜಿಲ್ಲಾಡಳಿತದಿಂದ ಸಾರಿಪುತ್ರ ಬುದ್ಧ ವಿಹಾರದಲ್ಲಿ ಅದ್ದೂರಿ ಭಗವಾನ ಬುದ್ಧ ಜಯಂತಿ 

ವಿಜಯಪುರ, ಮೇ 1 ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಭಗವಾನ್ ಬುದ್ಧ ಜಯಂತ್ಯುತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. 

ಬುದ್ದ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಗವಾನ್ ಬುದ್ದರ ಭಾವಚಿತ್ರಕ್ಕೆ ಜಿಲ್ಲಾಡಳಿತ ಪುಷ್ಪಾರ್ಚನೆ ನಡೆಯಿತು. ಬಳಿಕ ಡಾ. ಬಿ.ಆರ್‌. ಅಂಬೇಡ್ಕರ್ ಭವನ ಜಿಲ್ಲಾ ಪಂಚಾಯಿತಿ ಮುಖ್ಯ ದ್ವಾರದಿಂದ ಸಾರಿಪುತ್ರ ಬುದ್ದ ವಿಹಾರದವರೆಗೆ ಭಗವಾನ್ ಬುದ್ಧನ ಭವ್ಯ ಭಾವಚಿತ್ರದ ಮೆರವಣಿಗೆ ಸಕಲ ಕಲಾ ವಾದ್ಯ ಮೇಳದೊಂದಿಗೆ ನಡೆಯಿತು.  

ಈ ಭವ್ಯ ಮೆರವಣಿಗೆಯಲ್ಲಿ ಬೌದ್ಧ ಉಪಾಸಕರು, ಉಪಾಸಕಿಯರು ಭಾಗವಹಿಸುವ ಮೂಲಕ ಮೆರವಣಿಗೆಯ ಕಳೆ ಹೆಚ್ಚಿಸಿದ್ದು ವಿಶೇಷವಾಗಿತ್ತು. ಬಳಿಕ ಸಾರಿ ಪುತ್ರ ಬುದ್ದ ವಿಹಾರದಲ್ಲಿ ಬೌದ್ಧ ಬಿಕ್ಕುಗಳಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. 

ಬಳಿಕ ಬುದ್ದ ವಿಹಾರದಲ್ಲಿ ಭಗವಾನ್ ಬುದ್ದ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿಗಳಾದ ಡಾ. ಓದ್ರಾಮ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು, ಜಗತ್ತಿಗೆ ಕರುಣೆಯ ಸಂದೇಶ ಸಾರಿದ ಭಗವಾನ್ ಬುದ್ಧನ ತತ್ವಗಳು ಹಾಗೂ ಸಂದೇಶಗಳು ಇಂದಿಗೂ ಹಾಗೂ ಎಂದಿಗೂ ಪ್ರಸ್ತುತವಾಗಿದ್ದು, ಸಾರ್ವಜನಿಕರು ಬುದ್ಧನ ತತ್ವಗಳನ್ನು ಅರ್ಥೈಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಕರೆ ನೀಡಿದರು.ಬೌದ್ಧ ಧರ್ಮದ ಪಿತಾಮಹ ಎಂದೇ ಜಗದ್ವಿಖ್ಯಾತಿ ಪಡೆದ ಭಗವಾನ್ ಗೌತಮ ಬುದ್ಧ ಎಂದರೆ, ಜ್ಞಾನದ ಸಂಕೇತ. ಹಾಗಾಗಿಯೇ ಬುದ್ಧ ಜಯಂತಿಯನ್ನ ಧಪೂರ್ಣಿಮೆ ಎಂದು ಜ್ಞಾನದ ಪ್ರತೀಕವಾಗಿ  ಆಚರಿಸಲಾಗುತ್ತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.  

ಇಂದು ಕರ್ನಾಟಕ, ಭಾರತ ಹಾಗೂ ಇಡೀ ಜಗತ್ತಿನಾದ್ಯಂತ ಭಗವಾನ್ ಬುದ್ಧರ ಜಯಂತಿಯನ್ನು ಸಡಗರದಿಂದ ಆಚರಿಸಲಾಗುತ್ತಿದೆ ಎಂದರು. 

ಗೌತಮ ಬುದ್ಧರು ಸಾರಿದ ಬೋಧನೆಗಳು ಸಾರ್ವಕಾಲಿಕ ಸತ್ಯವಾಗಿದ್ದು, ಬುದ್ಧ ಧರ್ಮವು ಮಾನವನ ಅನುಭವದ ಆಳವಾದ ತಿಳಿವಳಿಕೆ ಹೊಂದಿದೆ. ಮನುಷ್ಯನ ಮುಕ್ತಿ ಮಾರ್ಗಕ್ಕೆ ಪ್ರಾಯೋಗಿಕ ಮಾರ್ಗವನ್ನು ಕಲ್ಪಿಸುತ್ತದೆ ಎಂದರು. ತಮ್ಮ ತತ್ವ ಸಿದ್ಧಾಂತಗಳಿಂದಾಗಿ ಕರುಣಾಳು ಎಂದು ಹೆಸರುವಾಸಿಯಾಗಿರುವ ಭಗವಾನ್ ಬುದ್ದರ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಭಗವಾನ್ ಬುದ್ಧ ಜಯಂತಿಯನ್ನು ಸಾರ್ಥಕಗೊಳಿಸಬೇಕು ಎಂದರು.ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳು ಆಯೋಗದ ಸದಸ್ಯ ಸುನೀಲ ಉಕ್ಕಲಿ ಮಾತನಾಡಿ, ಅಹಿಂಸೆ ಹಾಗೂ ಕರುಣೆಯ ಸಂದೇಶ ಸಾರಿದ ಗೌತಮ ಬುದ್ಧನ ಉನ್ನತ ತತ್ವ ಸಿದ್ಧಾಂತಗಳಿಂದಾಗಿ ಬೌದ್ಧ ಧರ್ಮ ಇಂದು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಹಾಗಾಗಿ ಬೌದ್ಧ ಧರ್ಮ. ಅದೊಂದು  ಶಿಕ್ಷಣ ವ್ಯವಸ್ಥೆಯಾಗಿದೆ ಎಂದು ಬೌದ್ಧ ಧರ್ಮದ ಮಹತ್ವವನ್ನು ವಿವರಿಸಿದರು. 

ಗೌತಮ ಬುದ್ಧ ಅಂದಿನ ಹಾಗೂ ಇಂದಿನ ಸಮಸ್ಯೆಗಳಿಗೆಲ್ಲ  ಆಗಿದ್ದರು. ಹಾಗಾಗಿಯೇ ಬೌದ್ದ ಧರ್ಮ ಇಂದು ಜಾಗತಿಕವಾಗಿ ದೊಡ್ಡದಾಗಿ ಬೆಳೆದಿದೆ. ವಿಸಿಡಂ ಎಂದರೆ ಅರಿವು. ಬುದ್ಧರು ಸಾರಿದ ತತ್ವ ಸಿದ್ಧಾಂತಗಳು ಸಾರ್ವಕಾಲಿಕ ಸತ್ಯವಾಗಿವೆ. ಈಗಿನ ಯುದ್ಧಗಳಿಗೆ ಬುದ್ದನ ತತ್ವಗಳಲ್ಲಿ ಪರಿಹಾರ ಅಡಗಿದೆ ಎಂದರು. ಜಗತ್ತಿಗೆ ಅಹಿಂಸಾ ಮಾರ್ಗಗಳನ್ನು ಹೇಳಿದ ಗೌತಮ ಬುದ್ದರ ಪಂಚಶೀಲ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು. 

ಸಾರಿಪುತ್ರ ಬುದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಅಧ್ಯಕ್ಷತೆ ವಹಿಸಿ, ಜಗತ್ತಿನಲ್ಲಿ ಬೌದ್ಧ ಧರ್ಮಕ್ಕೆ ಶ್ರೇಷ್ಠತೆ ಕಾಯ್ದುಕೊಂಡಿದೆ. ಹಾಗಾಗಿ ಬುದ್ಧನ ಹೆಸರಿನಲ್ಲಿ ಪ್ರಪಂಚಾದ್ಯಂತ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ವಿಜಯಪುರದ ಬುದ್ಧ ವಿಹಾರದಲ್ಲಿ ಪ್ರತಿ ಭಾನುವಾರ ಪ್ರಾರ್ಥನೆ, ಆರಾಧನೆ ಮತ್ತಿತರೆ ಕಾರ್ಯಕ್ರಮಗಳು ನಡೆಯುತ್ತಿವೆ. ಸಾರ್ವಜನಿಕರು ಇಲ್ಲಿ ನಡೆಯುವ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಮೂಲಕ ಬುದ್ಧನ ತತ್ವ ಸಿದ್ಧಾಂತಗಳನ್ನು ಅರ್ಥೈಸಿಕೊಳ್ಳಬೇಕು ಎಂದರು. 

ಕಳೆದ ಎರಡು ವರ್ಷಗಳಿಂದ ಜಿಲ್ಲಾಡಳಿತ ಬುದ್ಧ ವಿಹಾರದಲ್ಲಿ ಭಗವಾನ್ ಬುದ್ದ ಜಯಂತಿ ಆಚರಿಸುತ್ತಿರುವ ಕಾರ್ಯ ಶ್ರೇಷ್ಠವಾಗಿದೆ. ಹಾಗಾಗಿ ಜಿಲ್ಲಾಡಳಿತದ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದರು. ಬುದ್ದ ವಿಹಾರದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು. 

ತಾಳಿಕೋಟೆಯ ಎಸ್‌.ಕೆ. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಸುಜಾತಾ ಚಲವಾದಿ ಬುದ್ದ ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.ಬುದ್ದನ ಆಸೆಯಂತೆ ಪ್ರತಿಯೊಬ್ಬರೂ ಆಸೆಗಳನ್ನು ತ್ಯಾಗ ಮಾಡಬೇಕು ಎಂದರು. ಸಮ ಸಮಾಜ ಕಟ್ಟಬೇಕು ಎಂಬುದು ಬುದ್ಧರ ಆಸೆಯಾಗಿತ್ತು. ಬುದ್ಧರು ತಮ್ಮ ಜೀವನದುದ್ದಕ್ಕೂ ಇದೆ ಸಂದೇಶವನ್ನು ಸಾರುತ್ತಿದ್ದರು. ಇದನ್ನೇ  ದೇಶದ ಇತರೇ ಮಹಾನ್ ಪುರುಷರು ಹೇಳುತ್ತಿದ್ದರು. ಹಾಗಾಗಿ ಎಲ್ಲರೂ ಸಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು. ಜೊತೆಗೆ ಬುದ್ಧ ಹೇಳಿಕೊಟ್ಟ ಅಷ್ಟಾಂಗ ಮಾರ್ಗಗಳು ಹಾಗೂ ಸ್ತ್ರೀ ಸಮಾನತೆ ಕಾಪಾಡಿಕೊಳ್ಳಬೇಕು ಎಂದ ಅವರು, ಆ ಮೂಲಕ ಡಾ. ಬಾಬಾಹೇಬ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಲಿಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು. 

ಶಾಕಾ ಬಂಥೇಜಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮುಖಂಡರಾದ ಅಭಿಷೇಕ ಚಕ್ರವರ್ತಿ, ಅನೀಲ ಹೊಸಮನಿ, ನಾಗರಾಜ್ ಲಂಬು, ಅಡಿವೆಪ್ಪ ಸಾಲಗಲ್, ಶ್ರೀನಾಥ ಪೂಜಾರಿ, ಮೋಹನ ಕಟ್ಟಿಮನಿ, ವಿದ್ಯಾವತಿ ಅಂಕಲಗಿ, ಪ್ರಭುಗೌಡ ಬಿರಾದಾರ ಸೇರಿದಂತೆ ಬೌದ್ದ ಉಪಾಸಕರು, ಉಪಾಸಕಿಯರು ಪಾಲ್ಗೊಂಡಿದ್ದರು.