ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ: ಸಮಗ್ರ ಸಿದ್ಧತೆಗೆ ಒತ್ತು : ಜಿಲ್ಲಾಧಿಕಾರಿ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ: ಸಮಗ್ರ ಸಿದ್ಧತೆಗೆ ಒತ್ತು : ಜಿಲ್ಲಾಧಿಕಾರಿ District Disaster Management Authority meeting: Emphasis on comprehensive preparedness: Deputy Commi

ಧಾರವಾಡ 12 : ನೈಸರ್ಗಿಕ ವಿಪತ್ತು, ಹವಾಮಾನ ಬದಲಾವಣೆ, ಸಶಸ್ತ್ರ ಸಂಘರ್ಷ, ಸಾಂಕ್ರಾಮಿಕ ರೋಗಗಳು ಮತ್ತು ಸಂಕೀರ್ಣ ತುರ್ತುಸ್ಥಿತಿ ಮುಂತಾದ ಜಾಗತಿಕ ಮಾನವೀಯ ಬಿಕ್ಕಟ್ಟಿನ ಸಮಯದಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಕನಿಷ್ಟ ಆರಂಭಿಕ ಸೇವಾ ಪ್ಯಾಕೇಜ ತುಂಬಾ ಅವಶ್ಯಕವಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ಹೇಳಿದರು.  ಅವರು ಇಂದು (ಜೂ.12) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಕನಿಷ್ಟ ಆರಂಭಿಕ ಸೇವಾ ಪ್ಯಾಕೇಜ ಅಧ್ಯಾಯವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕ್ರಿಯಾ ಯೋಜನೆಯಲ್ಲಿ ಸೇರಿಸುವ ಕುರಿತ ಸಭೆಯಲ್ಲಿ ಮಾತನಾಡಿದರು.  

ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಬಾಲ್ಯವಿವಾಹ, ಅತ್ಯಾಚಾರ, ಲೈಂಗಿಕ ಹಿಂಸೆ, ಅಸುರಕ್ಷಿತ ಗರ್ಭಪಾತಗಳು, ಎಚ್‌.ಐ.ವ್ಹಿ ಸೇರಿದಂತೆ ಲೈಂಗಿಕ ರೋಗಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಈ ಪರಿಸ್ಥಿತಿಯಲ್ಲಿ ಗೌಪ್ಯ ಮತ್ತು ಸುರಕ್ಷಿತ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ಒದಗಿಸುವುದು ತುಂಬಾ ಅಗತ್ಯ ಇರುತ್ತದೆ. ವಿಪತ್ತುಗಳು ಸಂಭವಿಸಿದಾಗ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಅವಶ್ಯವಾಗಿರುತ್ತದೆ. ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಸೂಕ್ತ ಕ್ರಮಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ, ಕ್ರಮಗಳನ್ನು ಕೈಗೊಳ್ಳಬೇಕು.

ಆ ನಿಟ್ಟಿನಲ್ಲಿ ಪೂರ್ವ ತಯಾರಿಗಳನ್ನು ಕೈಗೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಎಂದು ಅವರು ತಿಳಿಸಿದರು.  ನವಜಾತ ಶಿಶುಗಳು ಹಾಗೂ ಗರ್ಭಿಣಿಯರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚಿನ ಕ್ರಮಗಳನ್ನು ವಹಿಸಬೇಕು. ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಕನಿಷ್ಟ ಆರಂಭಿಕ ಸೇವಾ ಪ್ಯಾಕೇಜ ಅಧ್ಯಾಯವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಕ್ರಿಯಾಯೋಜನೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದರು.