ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ)ಯಲ್ಲಿ ಡಿಪ್ಲೋಮಾ ತರಗತಿಗಳನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್‌

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ)ಯಲ್ಲಿ ಡಿಪ್ಲೋಮಾ ತರಗತಿಗಳನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್‌ District Collector Snehal R inaugurated the diploma classes at the Government Toolbox and Training C

ಲೋಕದರ್ಶನ ವರದಿ 

ಧಾರವಾಡ ಜೂ.11: ಧಾರವಾಡದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಈ ವರ್ಷದ ಹೊಸ ಡಿಪ್ಲೋಮಾ ತರಗತಿಗಳನ್ನು ಜಿಲ್ಲಾಧಿಕಾರಿ ಸ್ನೇಹಲ್‌. ಆರ್‌. ಅವರು ಉದ್ಘಾಟಿಸಿ, ಮಾತನಾಡಿದರು.  ಭಾರತ ಪ್ರಪಂಚದ ಅತಿ ಯುವ ದೇಶವಾಗಿದ್ದು, ಇಲ್ಲಿಯ ಯುವಕರು ಕೌಶಲ್ಯ ಆಧಾರಿತ ತರಬೇತಿಗಳನ್ನು, ಡಿಪ್ಲೋಮಾ ಪದವಿಗಳನ್ನು ಪಡೆದರೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಇರುವ ಕಂಪನಿಗಳಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಪಡೆದು ಆರ್ಥಿಕವಾಗಿ ಮುಂದೆ ಬರಲು ಸಹಾಯಕವಾಗಬಲ್ಲದು ಎಂದರು. ವಿದ್ಯಾರ್ಥಿಗಳು ಓದಿನ ಜೊತೆ ಹೊಸ ಹೊಸ ತಾಂತ್ರಿಕ ಕೌಶಲ್ಯಗಳನ್ನು ಕಲಿಯಬೇಕು, ಅಂತಹ ಹೊಸ ತಾಂತ್ರಿಕ ಕೌಶಲ್ಯಗಳನ್ನು ಸರಕಾರಿ ಸಂಸ್ಥೆ ಜಿಟಿಟಿಸಿ ಕಲಿಸುತ್ತಿದೆ ಎಂದು ಹೇಳಿದರು.  ಕೌಶಲ್ಯ ಕಲಿಕಾ ಕೇಂದ್ರವಾಗಿ 50 ವರ್ಷದ ಅನುಭವ ಜಿ.ಟಿ.ಟಿ.ಸಿ ಗೆ ಇದೆ. ದೇಶದ ಮತ್ತು ವಿದೇಶದ ಅತ್ಯುನ್ನತ ಕೈಗಾರಿಕೆಗಳಿಗೆ ಕೌಶಲ್ಯ ಭರಿತ ಮಾನವ ಸಂಪನ್ಮೂಲ ನೀಡುತ್ತಾ ಬಂದಿದೆ.

ಇಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ವಿದೇಶದಲ್ಲೂ ಕೆಲಸ ಮಾಡುತ್ತಿರುವ ನಿದರ್ಶನಗಳಿವೆ. ಅಷ್ಟೇ ಅಲ್ಲ, ದೇಶದ ಹಲವೆಡೆ ಮತ್ತು ಹುಬ್ಬಳ್ಳಿ ಧಾರವಾಡದಲ್ಲೂ ಈ ವಿದ್ಯಾರ್ಥಿಗಳು ತಮ್ಮ ಸ್ವಂತ ಕೈಗಾರಿಕೆಗಳನ್ನು ಆರಂಭಿಸಿ ಹಲವಾರು ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಿದ ಉದಾಹರಣೆಗಳಿವೆ. ಮುಂದಿನ ವರ್ಷಗಳಲ್ಲಿ ಕೌಶಲ್ಯವಿರುವ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಬರಲಿದೆ. ತಾಂತ್ರಿಕ ಬದಲಾವಣೆಗಳು, ಕೈಗಾರಿಕಾ ಮತ್ತು ಸೇವಾ ವಿಭಾಗಗಳಲ್ಲಿ ಹೊಸ ಬದಲಾವಣೆಯ ಬಿರುಗಾಳಿಯನ್ನೇ ಎಬ್ಬಿಸಲಿವೆ. ಕೌಶಲ್ಯ (ಸ್ಕಿಲ್), ಮರು ಕೌಶಲ್ಯ (ರಿಸ್ಕಿಲ್) ಹೆಚ್ಚಿನ ಕೌಶಲ್ಯ (ಆಪ್ ಸ್ಕಿಲ್) ಬಹುವಿಧ ಕೌಶಲ್ಯ (ಮಲ್ಟಿ ಸ್ಕಿಲ್) ಇವುಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಇವೆಲ್ಲ ತರಬೇತಿಗಳಿಗೆ ಜಿಟಿಟಿಸಿಯಲ್ಲಿ ಅವಕಾಶಗಳಿದ್ದು ಯುವ ಜನತೆ ಆಸಕ್ತಿಯಿಂದ ಇವುಗಳಲ್ಲಿ ಭಾಗವಹಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.