ಪೌರಕಾರ್ಮಿಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಕರೆ

ಪೌರಕಾರ್ಮಿಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಕರೆ District Collector Nagendra Prasad's call on Civil Workers' Day

ಲೋಕದರ್ಶನ ವರದಿ 

          ಬಳ್ಳಾರಿ 23: ಪೌರಕಾರ್ಮಿಕರ ಕಲ್ಯಾಣ ಮತ್ತು ಅವರ ಸಮಸ್ಯೆಗಳ ಪರಿಹಾರಕ್ಕೆ ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅತ್ಯಂತ ಸಂವೇದನಾಶೀಲರಾಗಿ ಹಾಗೂ ಮುಂಚೂಣಿಯಲ್ಲಿ ನಿಂತು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಅವರು ಹೇಳಿದರು. 

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ತಾವು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಸೆಪ್ಟೆಂಬರ್ ತಿಂಗಳಿಗೆ ಒಂದು ವರ್ಷ ಪೂರೈಸಿದ್ದು, ತಮ್ಮ ಅಧಿಕಾರಾವಧಿಯ ಆರಂಭದಲ್ಲಿಯೇ ಪೌರಕಾರ್ಮಿಕರು ನಿವೃತ್ತರಾಗುವ ದಿನವೇ ಪಿಂಚಣಿ ಹೊರತುಪಡಿಸಿ, ಅವರ ಎಲ್ಲಾ ಸೌಲಭ್ಯಗಳನ್ನು ತಲುಪಿಸಬೇಕೆಂದು ಆಯುಕ್ತರಿಗೆ ಸೂಚನೆ ನೀಡಲಾಗಿತ್ತು. ಈ ಸಲಹೆಯನ್ನು ಪಾಲಿಸುತ್ತಿರುವುದಕ್ಕೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. 

ಈ ಹಿಂದೆ ಬಿಬಿಎಂಪಿಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಹಂಚಿಕೊಂಡ ಜಿಲ್ಲಾಧಿಕಾರಿಗಳು, ಪೌರಕಾರ್ಮಿಕರಿಗೆ ವೈದ್ಯಕೀಯ ವೆಚ್ಚ ಮರುಪಾವತಿ, ನಿವೃತ್ತಿ ನಂತರದ ಸೌಲಭ್ಯಗಳು ಸಕಾಲಕ್ಕೆ ಸಿಗಬೇಕು ಎಂದು ಒತ್ತಿ ಹೇಳಿದ ಅವರು, ಕೆಲಸದ ಸ್ಥಳಗಳಲ್ಲಿ ವಿಶೇಷವಾಗಿ ಮಹಿಳಾ ಪೌರಕಾರ್ಮಿಕರಿಗೆ ಅಗತ್ಯ ಸುರಕ್ಷತೆಯನ್ನು ಒದಗಿಸುವಂತೆ ಸೂಚಿಸಿದರು. 

ಸರ್ಕಾರ ರೂಪಿಸಿರುವ ಯೋಜನೆಗಳನ್ನು ಅಧಿಕಾರಿಗಳು ನೂರಕ್ಕೆ ನೂರರಷ್ಟು ಪ್ರಾಮಾಣಿಕತೆಯಿಂದ ಜಾರಿಗೆ ತರಬೇಕು. ಕೇವಲ ಸಭೆಗಳಿಗಷ್ಟೇ ಸೀಮಿತವಾಗಿರದೆ, ನಿರಂತರವಾಗಿ ಪರೀಶೀಲನಾ ಸಭೆಗಳನ್ನು ನಡೆಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು. 

ಸರ್ಕಾರದಿಂದ ಪೌರಕಾರ್ಮಿಕರಿಗೆ ನಿವೇಶನ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಜಿಲ್ಲಾಡಳಿತದ ವತಿಯಿಂದ ತೆರವುಗೊಳಿಸಲಾದ ಒತ್ತುವರಿ ಜಾಗವನ್ನು ನಿವೇಶನಕ್ಕಾಗಿ ನೀಡಲು ಸಿದ್ಧವಿರುವುದಾಗಿ ಭರವಸೆ ನೀಡಿದರು.

         ಅದೇರೀತಿಯಾಗಿ ಮುಂಜಾನೆ ಕರ್ತವ್ಯಕ್ಕೆ ತೆರಳುವ ವೇಳೆ ಪೌರಕಾರ್ಮಿಕರಿಗೆ ಸಾರಿಗೆ ಸಮಸ್ಯೆಯಾಗುತ್ತಿರುವುದನ್ನು ಮನಗಂಡು, ಅಗತ್ಯವಿರುವ ಕಡೆ ಜಿಲ್ಲಾಡಳಿತದ ವತಿಯಿಂದ ವಾಹನ ಸೌಲಭ್ಯ ಒದಗಿಸುವ ಕುರಿತು ಪರೀಶೀಲಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.