ಸ.ಹಿ.ಪ್ರಾ ಶಾಲೆಗೆ 66 ಸಾವಿರ ರೂ. ಸಾಮಗ್ರಿ ಮಾನೆ ವಿತರಣೆ
ಹಾನಗಲ್ 19 :ತಾಲೂಕಿನ ಯಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಶ್ರೀನಿವಾಸ ಮಾನೆ 50ಅ-50ಅ ಕಾರ್ಯಕ್ರಮದಡಿ 66 ಸಾವಿರ ರೂ. ಬೆಲೆ ಬಾಳುವ ನಾನಾ ಸಾಮಗ್ರಿಗಳನ್ನು ವಿತರಿಸಿದರು. ಸ್ಮಾರ್ಟ್ ಟಿವಿ, ಲೈಬ್ರರಿ ಬುಕ್ ಆಲ್ಮೇರಾ, ಲಾಕರ್ ಸ್ಟೀಲ್ ಆಲ್ಮೇರಾ, ಆಫೀಸ್ ಟೇಬಲ್ ಸೇರಿದಂತೆ ಹಲವು ಸಾಮಗ್ರಿಗಳನ್ನು ವಿತರಿಸಿದರು. ಈ ಸಾಮಗ್ರಿಗಳಿಗೆ ತಗುಲಿದ ವೆಚ್ಚದಲ್ಲಿ ಅರ್ಧ ಹಣವನ್ನು ಗ್ರಾಮಸ್ಥರು ಭರಿಸಿದ್ದರೆ ಇನ್ನರ್ಧ ಹಣವನ್ನು ಶಾಸಕ ಮಾನೆ ವೈಯಕ್ತಿಕವಾಗಿ ಭರಿಸಿದ್ದಾರೆ. ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕೆಲಸ ಎನ್ನುವ ಭಾವನೆಯಿಂದ ಹೊರ ಬರಬೇಕಿದೆ. ಸರ್ಕಾರದ ನೆರವು ಪಡೆಯದೇ ತಾಲೂಕಿನಲ್ಲಿ ಕಳೆದ 2 ವರ್ಷಗಳ ಅವಧಿಯಲ್ಲಿ 95 ಶಾಲೆಗಳಿಗೆ 3 ಕೋಟಿ ರೂ. ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಕಲಿತ ಶಾಲೆಗೆ ಸೌಲಭ್ಯ ಕಲ್ಪಿಸಬೇಕಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ರೂಪಿಸಲಾಗಿರುವ 50ಅ-50ಅ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇದರ ಪ್ರೇರಣೆಯಿಂದಲೇ ಶಿಕ್ಷಣ ಇಲಾಖೆ ಹಳೆ ಬೇರು, ಹೊಸ ಚಿಗುರು ಕಾರ್ಯಕ್ರಮ ರೂಪಿಸಿ, ಸಮುದಾಯ, ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವ ಪಡೆಯುತ್ತಿದೆ. ತಾಲೂಕಿನಲ್ಲಿ ಸಂಘ, ಸಂಸ್ಥೆಗಳು, ಸಹೃದಯಿ ದಾನಿಗಳ ಮನವೊಲಿಸಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡ ದೊರಕಿಸಲಾಗುತ್ತಿದೆ. ತಾಲೂಕಿನ 11 ಶಾಲೆಗಳಲ್ಲಿ ಶೀಘ್ರ ರೋಟರಿ ಸಂಸ್ಥೆ ಶೌಚಾಲಯ ನಿರ್ಮಿಸಲಿದೆ ಎಂದು ಶಾಸಕ ಮಾನೆ ಈ ಸಂದರ್ಭದಲ್ಲಿ ತಿಳಿಸಿದರು.
ಎಸ್ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು, ಗ್ರಾಮಸ್ಥರು, ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.