ಮಳೆ ಕೊರತೆ, ಬೆಳೆ ಹಾನಿಯಿಂದ ಸಂಕಷ್ಟ; ಸರ್ಕಾರದ ಬರ ಘೋಷಣೆಯಲ್ಲಿ ತಾಲ್ಲೂಕು ಕೈಬಿಟ್ಟಿರುವುದಕ್ಕೆ ಅಸಮಾಧಾನ

ಮಳೆ ಕೊರತೆ, ಬೆಳೆ ಹಾನಿಯಿಂದ ಸಂಕಷ್ಟ; ಸರ್ಕಾರದ ಬರ ಘೋಷಣೆಯಲ್ಲಿ ತಾಲ್ಲೂಕು ಕೈಬಿಟ್ಟಿರುವುದಕ್ಕೆ ಅಸಮಾಧಾನ Distress due to rainfall deficit and crop loss; dissatisfaction over the exclusion of the taluk from

ಬರ ಪಟ್ಟಿಯಲ್ಲಿ ಶಿರಹಟ್ಟಿ ಹೆಸರು ಇಲ್ಲ: ರೈತರ ಆಕ್ರೋಶ  

 ಶಿರಹಟ್ಟಿ, ಆ.28: ಆಕಾಶದತ್ತ ನೋಡುತ್ತಾ ಬಿತ್ತನೆ ಮಾಡಿದ್ದ ರೈತನಿಗೆ ಇದೀಗ ಒಣಗುತ್ತಿರುವ ಬೆಳೆಗಳೇ ಕಣ್ಣೀರಿನ ಕಥೆ ಹೇಳುವಂತಾಗಿದೆ. ಮುಂಗಾರು ಮಳೆಯ ವೈಫಲ್ಯದಿಂದ ತಾಲ್ಲೂಕಿನ ಹಲವು ಭಾಗಗಳಲ್ಲಿ ಬೆಳೆಗಳು ಬಾಡುತ್ತಿದ್ದು, ಕೃಷಿ ಚಟುವಟಿಕೆಗಳು ಮಂದಗತಿಗೆ ತಲುಪಿವೆ. ಗ್ರಾಮೀಣ ಮಾರುಕಟ್ಟೆಯ ವಹಿವಾಟಿಗೂ ಹೊಡೆತ ಬಿದ್ದಿದೆ. ಇಂತಹ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ಘೋಷಿಸಿರುವ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಶಿರಹಟ್ಟಿ ಹೆಸರು ಕಾಣಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.  

ಇದು ಕೇವಲ ಸರ್ಕಾರಿ ಪಟ್ಟಿಯಲ್ಲಿ ತಾಲ್ಲೂಕಿನ ಹೆಸರು ಇಲ್ಲದಿರುವ ಪ್ರಶ್ನೆಯಲ್ಲ. ಸಂಕಷ್ಟದಲ್ಲಿರುವ ಅನ್ನದಾತನ ಬದುಕು, ಬೆಳೆ ನಷ್ಟಕ್ಕೆ ದೊರೆಯಬೇಕಾದ ಪರಿಹಾರ ಹಾಗೂ ಸರ್ಕಾರದ ನೆರವಿನ ಪ್ರಶ್ನೆಯಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಶಿರಹಟ್ಟಿಯಲ್ಲಿ ಶೇ.27ರಷ್ಟು ಮಳೆ ಕೊರತೆ  

ಆಗಸ್ಟ್‌ 7ರವರೆಗಿನ ಗದಗ ಜಿಲ್ಲೆಯ ಬರ ಪರಿಸ್ಥಿತಿ ಅವಲೋಕನದ ಸಂದರ್ಭದಲ್ಲಿ ಸಚಿವ ಬಸವರಾಜ ರಾಯರಡ್ಡಿ ಅವರು ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.31ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿಸಿದ್ದರು. ತಾಲ್ಲೂಕುವಾರು ಅಂಕಿ-ಅಂಶಗಳಲ್ಲಿ ಶಿರಹಟ್ಟಿಯಲ್ಲಿ ಶೇ.27ರಷ್ಟು ಮಳೆ ಕೊರತೆ ದಾಖಲಾಗಿರುವುದನ್ನೂ ಉಲ್ಲೇಖಿಸಲಾಗಿತ್ತು.  

ಈ ಹಿನ್ನೆಲೆಯಲ್ಲಿ ತಾಲ್ಲೂಕುವಾರು ವೈಜ್ಞಾನಿಕ ಪರೀಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಲಾಗಿತ್ತು. ಅಲ್ಲದೆ, ಸಚಿವರು ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕುಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಳೆ ಪ್ರಮಾಣ, ಬಿತ್ತನೆ, ಬೆಳೆಗಳ ಸ್ಥಿತಿ, ಬೆಳೆಹಾನಿ ಹಾಗೂ ರೈತರ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದರು.