‘ಶಿವಪಥವನ ಅರಿವೆಡೆ ಗುರುಪಥವೇ ಮೊದಲು’

‘ಶಿವಪಥವನ ಅರಿವೆಡೆ ಗುರುಪಥವೇ ಮೊದಲು’ Discourse program on the theme 'Sharanara Jeevana Darshan'

ಲೋಕದರ್ಶನ ವರದಿ 

ವಿಜಯಪುರ 12: ಬದುಕು ನಿಂತ ನೀರಲ್ಲ. ಅದು ಸುಖ-ದುಃಖಗಳ ಸಮ್ಮಿಶ್ರಣ. ನೀರಿನಂತೆ ಸದಾ ಶುಭ್ರವಾಗಿದ್ದು, ಎಲ್ಲರಲ್ಲೂ ಮತ್ತು ಎಲ್ಲದರಲ್ಲೂ ಒಳ್ಳೆಯದನ್ನು ಕಾಣುವಂತಹ ಮನೋಭಾವ ನಮ್ಮದಾಗಬೇಕು. ಹುಟ್ಟಿನಿಂದ ಸಾವಿನವರೆಗೆ ಎಂತಹ ಕಷ್ಟ-ನಷ್ಟಗಳು ಬಂದರೂ ಅವುಗಳನ್ನು ಸ್ವೀಕರಿಸುತ್ತಾ, ಸಂಸಾರವೆಂಬ ಜಂಜಾಟದಲ್ಲಿ ಚಿಂತೆ ಎಂಬುದು ಚಿತೆಯಾಗದಂತೆ, ಅದನ್ನು ಆ ಪರಶಿವನ ಕೃಪೆಯಿಂದ ಎದುರಿಸಿ ಬದುಕೆಂಬ ದಡ ಸೇರುತ್ತೇನೆಂಬ ಅಚಲ ನಂಬಿಕೆ ನಮ್ಮಲ್ಲಿರಬೇಕು ಎಂದು ವಿಜಯಪುರದ ುಷಣ್ಮುಖಾರೂಢ ಮಠದ ಪರಮ ಪೂಜ್ಯ ಶ್ರೀ ಶಿವಲಿಂಗೇಶ್ವರ ದೇವರು ಹೇಳಿದರು. 

ಅವರು ನಗರದ ಅಥಣಿ ರಸ್ತೆಯಲ್ಲಿರುವ ನವರಸಪುರದ ಶಿವಾಲಯ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ‘ಶರಣರ ಜೀವನ ದರ್ಶನ' ವಿಷಯದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.   

 ಅವರು ಮಾತನಾಡುತ್ತಾ, ಬಸವಣ್ಣನವರ ವಚನದಂತೆ, ನೆರೆ ಕೆನ್ನಗೆ, ತೆರೆ ಗಲ್ಲಕೆ, ಶರೀರ ಗೂಡು ಹೋಗುವ ಮುನ್ನ, ಅನ್ಯರಿಗೆ ಹಂಗಾಗದ ಮುನ್ನ ಪರಮಾತ್ಮನನ್ನು ನಿಷ್ಕಲಮಶ ಭಕ್ತಿಯಿಂದ ಪೂಜಿಸು ‘ ಎಂದು ಹೇಳುತ್ತಾ, ಅಧ್ಯಾತ್ಮ ಮತ್ತು ಸತ್ಸಂಗಗಳು ಕೇವಲ ವೃದ್ಧಾಪ್ಯ ಜನರಿಗೆ ಮಾತ್ರ ಬೇಕಾಗಿಲ್ಲ. ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ನಮ್ಮ ಮಕ್ಕಳು, ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಜ್ಞಾನವಿದೆ ಆದರೆ ಜೀವನ, ಬದುಕುವ ರೀತಿ-ನೀತಿ, ವೈಚಾರಿಕ-ಮೌಲ್ವಿಕ-ನೈತಿಕತೆಯೊಂದಿಗೆ ಹೇಗೆ ಸಮಾಜದಲ್ಲಿ ಬದುಕಬೇಕೆಂಬುದರ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ ಎಂದರು. ಪ್ರತಿದಿನವು ಶಿವಧ್ಯಾನ, ತಪಸ್ಸು, ಪ್ರಾರ್ಥನೆ ಮತ್ತು ಭಕ್ತಿ-ಭಾವದಿಂದ ಪೂಜಿಸುವ ಕಾರ್ಯ ನಡೆಯಬೇಕು. ಮನದ ಕಾಮನೆಗಳನ್ನು ಈಡೇರಿಸಿಕೊಳ್ಳಲು ಮತ್ತು ಜೀವನದಲ್ಲಿ ಸಂತೃಪ್ತಿ ಭಾವ ಹೊಂದಲು ಪರಮ ಶಿವನನ್ನು ನೆನೆಯುವಂತಾಗಬೇಕು. ನಮ್ಮ ಭಾವ, ಭಕುತಿ, ಇರುವಿಕೆ ಮತ್ತು ಸಮಾಜದಲ್ಲಿ ಇತರ ಒಳಿತಿಗಾಗಿ ಬದುಕುವ ನಡೆಯಾಗಬೇಕು. ಶಿವಪಥವನ ಅರಿವೆಡೆ ಗುರುಪಥವೇ ಮೊದಲು ಎಂಬುದನ್ನು ಅರಿತು ಸದಾ ಪರಮಾತ್ಮನಲ್ಲಿ ತಲ್ಲೀನತೆಗೊಂಡು ಜೀವನ-ಮುಕ್ತಿ ಪಡೆಯಬೇಕೆಂದು ಸಲಹೆ ನೀಡಿದರು.  

ಇದೇ ಸಂದರ್ಭದಲ್ಲಿ ಮಹಾಪ್ರಸಾದ ಸೇವೆಗೈದ ಶಿವಾನಂದ ಹಡಪದ ದಂಪತಿಗಳ ಸನ್ಮಾನ ಪೂಜ್ಯ ಸ್ವಾಮೀಜಿಯವರಿಂದ ನೆರವೇರಿತು.   

ಕಾರ್ಯಕ್ರಮದಲ್ಲಿ ದೇವಸ್ಥಾನದ ಚನ್ನವೀರ ಗೋಂಧಳೆ, ಮೋಹನಸಿಂಗ ಪತ್ತಾರ, ಬಾಬು ಮುಳವಾಡ, ಕೆ.ಜೆ.ಕೋಟ್ಯಾಳ, ಎಸ್‌.ಬಿ.ಕುಮಟಗಿ, ಶರಣಬಸಪ್ಪ ಬಲ್ಲಾಡ, ಅಪ್ಪು ಪಟ್ಟಣಶೆಟ್ಟಿ, ಕಾಶೀನಾಥ ಶೇಗಾವಿ, ಭಾರತಿ ಕಿಚಡಿ, ಶಕುಂತಲಾ ಅಂಕಲಗಿ, ಆಶಾ ಬಾಸೂತಕರ, ಸರೋಜಾ ಬಾಗಲಕೋಟ, ಅಶೋಕಗೌಡ ಪಾಟೀಲ, ಮಹಾಂತೇಶ ಕನ್ನೂರೆ, ಮಂಜುಳಾ ಕನಮಡಿ, ಇಂದಿರಾ ಬೀಳೂರ, ಲಕ್ಷ್ಮೀ ಕುಂಬಾರ, ಗೌರಮ್ಮ ತೆಲಸಂಗ, ಗೀತಾ ದೊಡಮನಿ, ಇನ್ನಿತರರು ಸಹ ಉಪಸ್ಥಿತರಿದ್ದರು.  

ಗಾನ ತರಂಗದ ಸಂಗೀತ ಶಾಲೆಯ ಶ್ರೀಶೈಲ ಬೀಳೂರ ಸಂಗಡಿಗರಿಂದ ಇವರಿಂದ ವಚನ ಗಾಯನ ಕಾರ್ಯಕ್ರಮ ಸುಶ್ರಾವ್ಯವಾಗಿ ಮೂಡಿಬಂದಿತು. ಈ ಕಾರ್ಯಕ್ರಮದಲ್ಲಿ ನವರಸಪುರ ಸುತ್ತಮುತ್ತಲಿನ ಬಡಾವಣೆಯ ಯುವಕರು, ಮಕ್ಕಳು, ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.