‘ಮನವೆಂಬ ಮರ್ಕಟ ಅಳಿದು ಸದ್ಭಾವ ಉದಯಿಸಲಿ’

‘ಮನವೆಂಬ ಮರ್ಕಟ ಅಳಿದು ಸದ್ಭಾವ ಉದಯಿಸಲಿ’ Discourse program on the theme 'Sharanara Jeevan Darshana'

ಲೋಕದರ್ಶನ ವರದಿ 

ವಿಜಯಪುರ 09: ಮನುಷ್ಯನ ಆಸೆಗೆ ಮಿತಿಯಿಲ್ಲ. ಅತಿಯಾಸೆ ದುಃಖಕ್ಕೆ ಮೂಲ. ಬದುಕಿನ ಭವಸಾಗರದಲ್ಲಿ ಇದ್ದುದರಲ್ಲಿಯೇ ಬದುಕಬೇಕು. ಅದಕ್ಕಂತಲೇ ಡಿ.ವ್ಹಿ.ಜಿ ಅವರು, ಇರುದೆಲ್ಲವ ಬಿಟ್ಟು, ಬಾರದೆಂಬುದನ್ನು ಬಿಡು, ಹರುಷಕ್ಕಿದೆ ದಾರಿ ಮಂಕುತಿಮ್ಮ ಎನ್ನುವಂತೆ, ಕಾಶ್ಮೀರದ ಮಾಂಡವ್ಯಪುರದ ರಾಜನಾಗಿದ್ದ ಮಹಾದೇವ ಭೂಪಾಲ ರಾಜವೈಭೋಗವನ್ನೆಲ್ಲ ಬಿಟ್ಟು ಕಾಯಕ ದಾಸೋಹ ತತ್ವವನ್ನು ಅಳವಡಿಸಿಕೊಂಡು ಮೋಳಿಗೆ ಮಾರಯ್ಯನಾಗಿ ಸೌದೆ ಮಾರುವ ಕಾಯಕ ಮಾಡುತ್ತ ಬದುಕಿದ ಶ್ರೇಷ್ಠ 12 ನೇಯ ಶತಮಾನದ ಶಿವಶರಣನಾದ ಎಂದು ಶಿವಲಿಂಗೇಶ್ವರ ದೇವರು ಹೇಳಿದರು.  

ಅವರು ನಗರದ ಅಥಣಿ ರಸ್ತೆಯಲ್ಲಿರುವ ನವರಸಪುರದ ಶಿವಾಲಯ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ‘ಶರಣರ ಜೀವನ ದರ್ಶನ' ವಿಷಯದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.   

 ಅವರು ಮಾತನಾಡುತ್ತಾ, 12 ನೇಯ ಶತಮಾನದ ಬಸವಾದಿ ಶರಣರು ಇಡೀ ಸಮಾಜ್ಯೋದ್ಧಾರಕ್ಕಾಗಿ ಶ್ರಮಿಸಿ, ನಡೆ-ನುಡಿ, ಆಚಾರ-ವಿಚಾರ, ಬದುಕುವ ರೀತಿ-ನೀತಿ, ಸಂಸ್ಕೃತಿ-ಸಂಸ್ಕಾರ, ಜೀವನ-ಮೌಲ್ಯ, ದಾನ-ಧರ್ಮ ಹಾಗೂ ಕಾಯಕ ತತ್ವಗಳ ಬಗ್ಗೆ ವಚನಗಳ ಮೂಲಕ ನಮಗೆ ತಿಳಿಸಿದ್ದಾರೆ. ಇಂತಹ ಶಿವಶರಣರ ಆದರ್ಶ-ತತ್ವಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಬದುಕು ಸುಂದರ ಮತ್ತು ಬಂಗಾರಮಯವಾಗಲು ಸಾಧ್ಯವೆಂದು ಹೇಳಿದರು. ಮನಸ್ಸನ್ನು ನಿರ್ಮಲವಾಗಿಟ್ಟು ಕೊಳ್ಳುವುದು ಮತ್ತು ಬಾಹ್ಯ ಆಡಂಬರಕ್ಕಿಂತ ಆಂತರಂಗದ ಭಕ್ತಿಯನ್ನು ಪರಿಶುದ್ಧವಾಗಿಸಿಕೊಳ್ಳಬೇಕೆಂಬ ಸಂದೇಶ ನೀಡಿದ್ದಾರೆ. ಆನೆ ಕುದುರೆ ಭಂಡಾರವಿರ್ದಡೇನೋ? ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ದ ಮಂಚ. ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ’ ಎಂಬ ಮೋಳಿಗೆ ಮಾರಯ್ಯ ವಚನದ ಸಾಲುಗಳು ಬದುಕಿನ ಸಾರ್ಥಕತೆ ಮತ್ತು ಒಳಮರ್ಮವನ್ನು ಎತ್ತಿ ತೋರಿಸುತ್ತವೆ. ಅದಕ್ಕಾಗಿ ಎಷ್ಟಿದ್ದರೇನು ಇರುವತನಕ ಎಲ್ಲವೂ ನನ್ನದೆಂದಿ ಕೊನೆಗೆ ನೀ ಬಿಟ್ಟು ಹೋಗುವುದು ಇನ್ನೊಬ್ಬರಿಗಾಗಿ ಎಂಬ ಭಜನಾ ಪದದಿಂದ ಎಲ್ಲರಿಗೂ ಜೀವನದ ನೈಜ ಅರ್ಥವಾಗಬೇಕು ಎಂದರು. 

ಇದೇ ಸಂದರ್ಭದಲ್ಲಿ ಮಹಾಪ್ರಸಾದ ಸೇವೆಗೈದ ಶಿವನಗೌಡ ಪಾಟೀಲ ದಂಪತಿಗಳನ್ನು ಸ್ವಾಮೀಜಿಗಳು ಸನ್ಮಾನಿಸಿದರು.   

ಕಾರ್ಯಕ್ರಮದಲ್ಲಿ ಅನೀಲ ಫತ್ತೇಪೂರ, ವಿಠ್ಠಲ ಜಗತಾಪ, ಎಸ್‌.ಎಸ್‌.ದೊಡಮನಿ, ಮಹಾದೇವ ಕಪಾಳಿ, ಸಂಗಮೇಶ ವಾಣಿ, ಪ್ರೊ. ಎಂ.ಎಸ್‌.ಖೊದ್ನಾಪೂರ, ರಾವಸಾಬ ಮೆಣಸಂಗಿ, ಪ್ರಫುಲ್ ನಿಂಬಾಳಕರ, ಪ್ರೊ.ಆರ್‌.ಎಸ್‌.ಧನ್ಯಾಳ, ಆಶಾ ಬಾಸೂತಕರ, ಹೇಮಾ ಅಂಗಡಿ, ಸ್ವಪ್ನಾ ಶಿವಗೊಂಡ, ಶಾಂತಾ ಹೆರಕಲ್, ರೇಣುಕಾ ಗಂಜಾಳ, ಕಲ್ಪನಾ ರಜಪೂತ, ಸಾವಿತ್ರಿ ಅಗ್ರಾಣಿ, ಪ್ರೇಮಾ ಅಕ್ಕಿ, ಸಂಗೀತಾ ಕಟ್ಟಿಮನಿ, ದಾನಮ್ಮ ಹಲಕುಡೆ, ಸೇರಿದಂತೆ ಇನ್ನಿತರರು ಸಹ ಉಪಸ್ಥಿತರಿದ್ದರು.  

ಮಲ್ಲಿಕಾರ್ಜುನ ಭಜನಾ ಸಂಘದ ವಿಠ್ಠಲ ಕನಮಡಿ, ಬಸಯ್ಯ ಮಠಪತಿ, ರಾಘವೇಂದ್ರ ಓತಿಹಾಳ, ಸಂಗಡಿಗರು ಒಂದು ಗಂಟೆ ಶಿಶುನಾಳ ಷರೀಪ, ನಿಜಗುಣ ಶಿವಯೋಗಿಗಳ ತತ್ವಪದಗಳ ಭಜನೆಯನ್ನು ಪ್ರಚುರಪಡಿಸಿದರು. ಈ ಪ್ರವಚನ ಕಾರ್ಯಕ್ರಮದಲ್ಲಿ ಪ್ರೊ. ಆರ್‌.ಎಸ್‌.ಮಾಕೊಂಡ ಹಾಗೂ ಸಾವಿತ್ರಿ ಹಿರೇಮಠ ಅವರಿಂದ ಸಂಗೀತ ಸುಧೆ ಜರುಗಿತು. ನವರಸಪುರದ ವಿವಿಧ ಬಡಾವಣೆಯ ನೂರಾರು ಮಕ್ಕಳು, ಮಹಿಳೆಯರು, ಯುವಕರು ಮತ್ತು ಹಿರಿಯರು ಮಹಾಪ್ರಸಾದ ಸೇವಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾದರು.