ಹೊರ ರಾಜ್ಯಗಳಿಗೆ ನೀರು ಹರಿಸಿದ ಬಳಿಕ ರೈತರ ನೆನಪಾಯಿತೇ? ಬಸವರಾಜ ಕ್ಯಾವಟರ್

ಹೊರ ರಾಜ್ಯಗಳಿಗೆ ನೀರು ಹರಿಸಿದ ಬಳಿಕ ರೈತರ ನೆನಪಾಯಿತೇ?  ಬಸವರಾಜ ಕ್ಯಾವಟರ್  Did you remember the farmers only after releasing water to other states? – Basavaraja Kyavatar

ಕೊಪ್ಪಳ, ಆಗಸ್ಟ್‌ 12: ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವ ನಿರ್ಧಾರವನ್ನು ಮೊದಲೇ ಕೈಗೊಳ್ಳಬೇಕಿತ್ತು. ಆದರೆ ಹೊರ ರಾಜ್ಯಗಳಿಗೆ ನೀರು ಹರಿಸಲು ನಿಗದಿ ಮಾಡಿದ ಬಳಿಕ ರಾಜ್ಯದ ರೈತರು ಸರ್ಕಾರಕ್ಕೆ ನೆನಪಾಗಿದ್ದಾರೆ ಎಂದು ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಆರೋಪಿಸಿದರು.  

ಈ ಕುರಿತು ಪ್ರಕಟಣೆ ನೀಡಿರುವ ಅವರು, ಒಂದು ಬೆಳೆ ಬೆಳೆಯಬೇಕಾದರೂ ಕನಿಷ್ಠ 120 ದಿನ ಕಾಲುವೆಗಳಿಗೆ ನೀರು ಹರಿಸಿದರೆ ಮಾತ್ರ ರೈತರಿಗೆ ಅನುಕೂಲವಾಗಲಿದೆ. ಆದರೆ ತುಂಗಭದ್ರಾ ಸಲಹಾ ಸಮಿತಿ ಸಭೆಯಲ್ಲಿ 90 ದಿನ ಕಾಲುವೆಗಳಿಗೆ ನೀರು ಬಿಡಲು ನಿರ್ಧರಿಸಿರುವುದು ಸರಿಯಲ್ಲ ಎಂದು ಟೀಕಿಸಿದರು.  

ತುಂಗಭದ್ರಾ ಜಲಾಶಯದಲ್ಲಿ ಸುಮಾರು 80 ಟಿಎಂಸಿ ನೀರು ಸಂಗ್ರಹವಾದ ಬಳಿಕ ಕಾಂಗ್ರೆಸ್ ಸರ್ಕಾರ ನೀರಾವರಿ ಸಲಹಾ ಸಮಿತಿ ಸಭೆ ಕರೆದಿರುವುದು ರೈತರ ಹಿತಕ್ಕಿಂತ ಪ್ರಚಾರದ ಉದ್ದೇಶ ಹೊಂದಿದೆ ಎಂದು ಅವರು ಆರೋಪಿಸಿದರು. ಜಲಾಶಯದಲ್ಲಿ ಕೇವಲ 26 ಟಿಎಂಸಿ ನೀರಿದ್ದಾಗಲೂ ವಿಜಯನಗರ ಎಡದಂಡೆಯ 11-ವಿ ವಿತರಣಾ ಕಾಲುವೆಗಳಿಗೆ ನೀರು ಹರಿಸುವಂತೆ ರೈತರ ಪರವಾಗಿ ಬಿಜೆಪಿ ಹೋರಾಟ ನಡೆಸಿತ್ತು ಎಂದು ಹೇಳಿದರು.  

ಕಾಡಾ ಕಚೇರಿ ಎದುರು ರೈತರು ನೀರಿಗಾಗಿ ಮನವಿ ಸಲ್ಲಿಸಿದಾಗ ಮೌನವಾಗಿದ್ದ ಕಾಂಗ್ರೆಸ್ ಶಾಸಕರು, ಇದೀಗ ಜಲಾಶಯ ಭರ್ತಿಯಾಗುತ್ತಿರುವ ಸಂದರ್ಭದಲ್ಲಿ ಸಭೆ ನಡೆಸಿ ರೈತರಿಗೆ ಉಪಕಾರ ಮಾಡುತ್ತಿರುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಕ್ಯಾವಟರ್ ವ್ಯಂಗ್ಯವಾಡಿದರು.  

ವಿಜಯನಗರ ಅರಸರ ಕಾಲದಿಂದಲೂ ತುಂಗಭದ್ರಾ ಹಾಗೂ ವಿಜಯನಗರ ಎಡದಂಡೆ ಕಾಲುವೆಗಳಿಗೆ ಆದ್ಯತೆಯ ಮೇರೆಗೆ ನೀರು ಹರಿಸುವ ಐತಿಹಾಸಿಕ ಪದ್ಧತಿ ಇದೆ. ಆದರೆ ಸರ್ಕಾರ ಮೊದಲು ಹೊರರಾಜ್ಯಗಳು ಹಾಗೂ ಕಾರ್ಖಾನೆಗಳಿಗೆ ನೀರು ಖಾತರಿಪಡಿಸಿ, ನಂತರ ರೈತರತ್ತ ಗಮನ ಹರಿಸುತ್ತಿದೆ ಎಂದು ಆರೋಪಿಸಿದರು. ರೈತರಿಗೆ ನೀಡುತ್ತಿರುವುದು ಸರ್ಕಾರದ ಕೊಡುಗೆಯಲ್ಲ; ಅದು ಅವರ ಹಕ್ಕಿನ ನೀರು ಎಂದು ಹೇಳಿದರು.  

ಕಳೆದ ವರ್ಷ ಬಸಾಪುರ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಒಡೆದು ಅಪಾರ ಹಾನಿಯಾಗಿದ್ದರೂ ಕಾಲುವೆಯ ಸಂಪೂರ್ಣ ಪರೀಶೀಲನೆ ಹಾಗೂ ಅಗತ್ಯ ದುರಸ್ತಿ ಕೈಗೊಳ್ಳಲಾಗಿಲ್ಲ. ಇದರ ಪರಿಣಾಮ ಈ ಬಾರಿಯೂ ಕಾರಟಗಿ ಬಳಿ ಕಾಲುವೆ ಒಡೆದು ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.  

ಸರ್ಕಾರ ಕೂಡಲೇ ಎಡದಂಡೆ ಕಾಲುವೆಯ ಸಂಪೂರ್ಣ ಸ್ಥಿತಿಯನ್ನು ತಾಂತ್ರಿಕವಾಗಿ ಪರೀಶೀಲಿಸಿ, ದುರ್ಬಲ ಸ್ಥಳಗಳಲ್ಲಿ ಮುಂಜಾಗ್ರತಾ ದುರಸ್ತಿ ಕೈಗೊಳ್ಳಬೇಕು. ಬೆಳೆಯ ಮಧ್ಯದಲ್ಲಿ ಕಾಲುವೆ ಒಡೆದು ರೈತರಿಗೆ ಮತ್ತಷ್ಟು ನಷ್ಟವಾಗದಂತೆ ಕ್ರಮವಹಿಸಬೇಕು. ವಿಜಯನಗರ ಎಡದಂಡೆಯ 11-ವಿ ವಿತರಣಾ ಕಾಲುವೆಯ ಕೊನೆಯ ಭಾಗದವರೆಗೂ ಎರಡು ಬೆಳೆಗಳಿಗೆ ಸಮರ​‍್ಕವಾಗಿ ನೀರು ಹರಿಸಬೇಕು ಎಂದು ಕ್ಯಾವಟರ್ ಒತ್ತಾಯಿಸಿದರು.