ನ.7 ರಿಂದ 9 ರವರೆಗೆ ರಾಜ್ಯಮಟ್ಟದ ಪುರುಷರ ಲಾನ್ ಟೆನ್ನಿಸ್ ಪಂದ್ಯಾವಳಿಗೆ ಧಾರವಾಡ ಸಜ್ಜು

ನ.7 ರಿಂದ 9 ರವರೆಗೆ ರಾಜ್ಯಮಟ್ಟದ ಪುರುಷರ ಲಾನ್ ಟೆನ್ನಿಸ್ ಪಂದ್ಯಾವಳಿಗೆ ಧಾರವಾಡ ಸಜ್ಜು Dharwad gears up for state-level men's lawn tennis tournament from Nov. 7 to 9

ಧಾರವಾಡ 05: ಧಾರವಾಡ ಡಿಸ್ಟ್ರಿಕ್ಟ್‌ ಲಾನ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ  ನವೆಂಬರ್ 7 ರಿಂದ 9 ರವರೆಗೆ ರಾಜ್ಯಮಟ್ಟದ ಪುರುಷರ ಲಾನ್ ಟೆನ್ನಿಸ್ ಪಂದ್ಯಾವಳಿಯನ್ನು ಡಿಡಿಎಲ್‌ಟಿಎ ಆವರಣದ ರಾಜ್ಯಾಧ್ಯಕ್ಷ ಪೆವಲಿನ್‌ದಲ್ಲಿ ಆಯೋಜಿಸಲಾಗಿದೆ  ಎಂದು ಕಾರ್ಯದರ್ಶಿ ಸಂತೋಷ ಶೆಟ್ಟಿ ಅವರು ತಿಳಿಸಿದರು. ಅವರು ಇಂದು (ನ.5) ಸಂಜೆ ಧಾರವಾಡ ಡಿಸ್ಟ್ರಿಕ್ಟ್‌ ಲಾನ್ ಟೆನ್ನಿಸ್ ಅಸೋಸಿಯೇಷನ್ ಕಚೇರಿ ಆವರಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ, ಮಾತನಾಡಿದರು. ರಾಜ್ಯಮಟ್ಟದ ಪುರುಷರ ಲಾನ್ ಟೆನ್ನಿಸ್ ಪಂದ್ಯಾವಳಿಯು ನವೆಂಬರ್ 7 ರಂದು ಬೆಳಿಗ್ಗೆ 7 ಗಂಟೆಗೆ ಉದ್ಘಾಟನೆಗೊಳ್ಳುತ್ತದೆ. ಅವಳಿ ನಗರದ ಒಟ್ಟು 8 ಟೆನಿಸ್ ಕೋರ್ಟ್‌ಗಳಲ್ಲಿ ಪಂದ್ಯಗಳು ನಡೆಯುತ್ತವೆ. ಈಗಾಗಲೇ ಸುಮಾರು 260 ಜನರು ನೊಂದಣಿ ಮಾಡಿಕೊಂಡಿದ್ದಾರೆ. ಆಟಗಾರರ ನೋಂದಣಿಗೆ ಇನ್ನು ಅವಕಾಶವಿದ್ದು, ನವೆಂಬರ್ 7 ರಿಂದ 9 ವರೆಗೆ ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪಂದ್ಯಾವಳಿಗಳು ಜರಗಲಿವೆ. ಅಂದಾಜು 400 ಸ್ಪರ್ಧಾಳುಗಳು ಭಾಗವಹಿಸುವ ನೀರೀಕ್ಷೆ ಇದೆ ಎಂದು ಅವರು ಹೇಳಿದರು.  

ಪಂದ್ಯಾವಳಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಉದ್ಘಾಟಿಸುವರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧ್ಯಕ್ಷತೆ ವಹಿಸುವರು. ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಕ್ಲೇ ಕೋರ್ಟ ಆವರಣವನ್ನು ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸುವರು. ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ವಿತರಿಸಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಾಲಕ ಬಾಲಕೀಯರಿಗೆ ಟೆನ್ನಿಸ್ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಲು ಈ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಡಿಡಿಎಲ್‌ಟಿಎ ಆವರಣದ ರಾಜ್ಯಾಧ್ಯಕ್ಷ ಪೆವಲಿನ್‌ದಲ್ಲಿ ಸುಮಾರು 25 ಕ್ಕೂ ಹೆಚ್ಚು ಮಕ್ಕಳು ಪ್ರತಿದಿನ ಟೆನ್ನಿಸ್ ತರಬೇತಿಯನ್ನು ಪಡೆಯುತ್ತಿದ್ದಾರೆ. 

ಈ ರಾಜ್ಯಮಟ್ಟದ ಪಂದ್ಯಾವಳಿಗೆ ಹಲವಾರು ಸಂಘ ಸಂಸ್ಥೆಗಳು, ಕ್ರೀಡಾ ಅಭಿಮಾನಿಗಳು ಸಹಕಾರ ನೀಡಿದ್ದಾರೆ ಎಂದು ಡಿಡಿಎಲ್‌ಟಿಎ ಕಾರ್ಯದರ್ಶಿ ಸಂತೋಷ ಆರ್‌. ಶೆಟ್ಟಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಡಿಡಿಎಲ್‌ಟಿಎ ಖಜಾಂಚಿ ಸಂಪತ್ತ ಕುಬಸದ, ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ ಕುಲಕರ್ಣಿ ಮತ್ತು ವಿರೇಶ ಕೆಲಗೇರಿ ಉಪಸ್ಥಿತರಿದ್ದರು.