ಶೇರುದಾರರ ಸಹಕಾರದಿಂದ ಸಂಘದ ಅಭಿವೃದ್ಧಿ

ಶೇರುದಾರರ ಸಹಕಾರದಿಂದ ಸಂಘದ ಅಭಿವೃದ್ಧಿ  Development of the society with the cooperation of shareholders


ತಾಳಿಕೋಟಿ 19: ಗ್ರಾಮೀಣ ಭಾಗದ ವಿವಿಧೋದ್ದೇಶ ಸಹಕಾರಿ ಸಂಘಗಳು ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು ಹೇಳಿದರು. ತಾಲೂಕಿನ ಮಿಣಜಗಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 14ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಹಕಾರಿ ಸಂಘಗಳು ಶೇರುದಾರರ ಪರಸ್ಪರ ಸಹಕಾರದಿಂದ ನಡೆಯುತ್ತವೆ.

ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಸಂಘದ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು. ತಾಳಿಕೋಟಿಯ ಎಸ್‌.ಕೆ. ಮಹಿಳಾ ಕಾಲೇಜಿನ ಉಪನ್ಯಾಸಕ ಎಸ್‌.ಎಸ್‌. ನಾಡಗೌಡ ಮಾತನಾಡಿ, ವಿವಿಧೋದ್ದೇಶ ಸಹಕಾರಿ ಸಂಘಗಳು ಸದಸ್ಯರು ಹಾಗೂ ಸಾರ್ವಜನಿಕರ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತವೆ. ರೈತರಿಗೆ ರಸಗೊಬ್ಬರ, ಬೀಜ, ಕೃಷಿ ಉಪಕರಣಗಳನ್ನು ಒದಗಿಸುವುದರ ಜೊತೆಗೆ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವಲ್ಲಿ ಸಹಕಾರ ನೀಡುತ್ತವೆ ಎಂದರು. ಡಿಸಿಸಿ ಬ್ಯಾಂಕ್ ನೋಡಲ್ ಅಧಿಕಾರಿ ಎಸ್‌.ಎಸ್‌. ಉಣ್ಣಿಭಾವಿ ರೈತರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ದೊರೆಯುವ ಆರ್ಥಿಕ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಗುರ​‍್ಪಗೌಡ ಬಾ. ಪಾಟೀಲ ವಾರ್ಷಿಕ ವರದಿ ಮಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಶಿಧರ ಮ. ಬೆಣ್ಣೂರ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಸನಗೌಡ ಪಾಟೀಲ, ವೃತ್ತಿಪರ ನಿರ್ದೇಶಕ ಶೇಖರ ಗದಿಗೆಪ್ಪಗೋಳ, ವಿಡಿಸಿಸಿ ಬ್ಯಾಂಕ್ ಕ್ಷೇತ್ರ ಸಿಬ್ಬಂದಿ ಎಸ್‌.ಎಂ. ಸುಲ್ತಾನಪುರ, ನಿರ್ದೇಶಕರು, ಶೇರುದಾರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.