ಗಾಂಧಿನಗರ ಶಿಕಾರಖಾನೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಒತ್ತಾಯ

ಗಾಂಧಿನಗರ ಶಿಕಾರಖಾನೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಒತ್ತಾಯ Demand to provide basic amenities at the Gandhinagar Shikarkhana

ಲೋಕದರ್ಶನ ವರದಿ 

  ವಿಜಯಪುರ 10: ಗಾಂಧಿ ನಗರ ಶಿಕಾರಖಾನೆ ಓಣಿಯ ದಲಿತಕೇರಿ ರಸ್ತೆಯ ಅಪೂರ್ಣ ಕಾಮಗಾರಿಯನ್ನು ಕೂಡಲೇ  ಪೂರ್ಣಗೊಳಿಸಿ, ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ವಿಜಯಪುರ ನಗರದ ಗಾಂಧಿ ನಗರ ಶಿಕಾರಖಾನೆ ಓಣಿಯ ದಲಿತಕೇರಿಯ ನಿವಾಸಿಗಳು ಅಪರ ಜಿಲ್ಲಾಧಿಕಾರಿ ಡಾ.ಓದ್ರಾಮ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡ ಶಿವಾಜಿ ಜಮಖಂಡಿ ಮಾತನಾಡಿ, ಗಾಂಧಿ ನಗರ ಶಿಕಾರಖಾನೆ ಓಣಿಯ ದಲಿತಕೇರಿಯಲ್ಲಿನ ಅಪೂರ್ಣ ರಸ್ತೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು. ಕಾಮಗಾರಿಯ ಗುಣಮಟ್ಟವನ್ನು ಪರೀಶೀಲಿಸಿ, ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು.

ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಗುತ್ತಿಗೆದಾರರ ಬಿಲ್ ಪಾವತಿಯನ್ನು ತಡೆಹಿಡಿಯಬೇಕು.  ದಲಿತಕೇರಿಯ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಓಣಿಯಲ್ಲಿರುವ ಕಸದ ರಾಶಿಗಳನ್ನು ತಕ್ಷಣ ತೆರವುಗೊಳಿಸಿ, ನಿಯಮಿತ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು. ಹಾಳಾಗಿರುವ ಸಮುದಾಯ ಭವನಗಳನ್ನು ಕೂಡಲೇ ಪರೀಶೀಲಿಸಿ, ಅವುಗಳ ಪುನಶ್ಚೇತನ ಹಾಗೂ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

ಗಾಂಧಿ ನಗರ ಶಿಕಾರಖಾನೆ ದಲಿತಕೇರಿಗೆ ರಸ್ತೆ, ಚರಂಡಿ, ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ, ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಆದ್ದರಿಂದ, ಮೇಲ್ಕಂಡ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ನಮ್ಮ ದಲಿತಕೇರಿಯ ನಿವಾಸಿಗಳಿಗೆ ಶೀಘ್ರವಾಗಿ ಅನುಕೂಲ ಕಲ್ಪಿಸಿಕೊಡಬೇಕೆಂದು ದಲಿತಕೇರಿಯ ಓಣಿಯ ಪರವಾಗಿ ಆಗ್ರಹಿಸಿದರು.