ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಸಲು ಆಗ್ರಹ

ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಸಲು ಆಗ್ರಹ  Demand to fulfill construction workers' demands

ಲೋಕದರ್ಶನ ವರದಿ 

ಧಾರವಾಡ ಸೆ.10 : ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು ಸಂಯೋಜಿತ) ವತಿಯಿಂದ ಜಿಲ್ಲಾ ಕಾರ್ಮಿಕ ಕಚೇರಿ ಎದುರು ಪ್ರತಿಭಟನೆ ನಡೆಯಿತು.  

ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಈರಣ್ಣ ಬೆಳ್ಳುಂಡಗಿ, ಕಾರ್ಮಿಕರು ಕಾರ್ಮಿಕ ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಗಳನ್ನು ಸಣ್ಣಪುಟ್ಟ ಕಾರಣಗಳಿಗಾಗಿ ತಿರಸ್ಕರಿಸಲಾಗುತ್ತಿದೆ. ಕಾರ್ಮಿಕ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು. ಕಾರ್ಮಿಕರಿಗೆ ಸೂಕ್ತ ಮಾಹಿತಿ ಹಾಗೂ ಸ್ಪಂದನೆ ನೀಡಬೇಕು ಎಂದು ಆಗ್ರಹಿಸಿದರು.  

ಕಾರ್ಮಿಕರ ಕಾರ್ಡ್ಗಳನ್ನು ಅನಗತ್ಯ ಕಾರಣಗಳಿಂದ ರದ್ದುಪಡಿಸದೆ, ವೀಡಿಯೊ ಕಾಲ್ ಮೂಲಕ ಕೆಲಸದ ಸ್ಥಳ ಪರೀಶೀಲಿಸಿ ಕಾರ್ಡ್ಗಳನ್ನು ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.  

ಕಾರ್ಮಿಕ ಸಂಘಟನೆಯ ಹಿರಿಯ ಮುಖಂಡ ಸಂಗಪ್ಪ ಕಪಾಲಿ ಮಾತನಾಡಿ, ಕಾರ್ಮಿಕ ಸಂಘಟನೆಗಳನ್ನು ಬಲಪಡಿಸಿ ಐಕ್ಯ ಹೋರಾಟಗಳ ಮೂಲಕ ಹಕ್ಕುಗಳನ್ನು ಪಡೆಯಬೇಕು ಎಂದು ಕರೆ ನೀಡಿದರು.  

ಕಾರ್ಮಿಕ ಅಧಿಕಾರಿಗಳು ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ, ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು. ಅಲ್ಲದೆ, 15 ದಿನಗಳೊಳಗೆ ಮಾತುಕತೆ ಸಭೆ ಕರೆಯುವುದಾಗಿ ತಿಳಿಸಿದರು.  

ಪ್ರತಿಭಟನೆಯಲ್ಲಿ ಬುಲಾನಿಸಿದ್ದ ಹಳ್ಳಿ, ಮಡ್ಯಪ್ಪ ನಾಟಿಕರ್, ಬಸವರಾಜ ಬಳೂರ್ಗಿ, ಸದಾಶಿವ ಪಾಟೀಲ, ಮೊಮ್ಮದ್ ರಫೀಕ್ ನಗರಾಚಿ, ಅಪ್ಪು ನಾಟಿಕರ್, ಸಿದ್ದರಾಮಯ್ಯ ನಾಟಿಕರ್ ಸೇರಿದಂತೆ ಹಲವು ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.