ಸವದತ್ತಿ ಬರಪೀಡಿತ ಘೋಷಣೆಗೆ ಆಗ್ರಹ

ಸವದತ್ತಿ ಬರಪೀಡಿತ ಘೋಷಣೆಗೆ ಆಗ್ರಹ  Demand to declare Savadatti drought-hit


ಸವದತ್ತಿ 19: ಮುಂಗಾರು ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಸವದತ್ತಿ ಹಾಗೂ ರಾಮದುರ್ಗ ತಾಲೂಕುಗಳನ್ನು ಕೂಡಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ವಿವಿಧ ರೈತ ಸಂಘಟನೆಗಳ ಮುಖಂಡರು ಆಗ್ರಹಿಸಿದರು. ಸವದತ್ತಿ ತಾಲೂಕಿನ ವಿವಿಧ ರೈತ ಸಂಘಟನೆಗಳು ಹಾಗೂ ಒಕ್ಕೂಟದ ವತಿಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಹಶೀಲ್ದಾರ್ ಗ್ರೇಡ್‌-2 ಎಂ.ಎನ್‌. ಮಠದ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರೈತ ಮುಖಂಡ ಶಿವಾನಂದ ಸರದಾರ ಮಾತನಾಡಿ, ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಸವದತ್ತಿ ಮತ್ತು ರಾಮದುರ್ಗ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಜಗದೀಶ್ ಅಗಡಿ ಮಾತನಾಡಿ, ಸವದತ್ತಿ ತಾಲೂಕನ್ನು ಕೂಡಲೇ ಬರಪೀಡಿತ ಎಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುರೇಶ್ ಸಂಪಗಾವಿ ಮಾತನಾಡಿ, ಮಳೆಯಿಲ್ಲದೆ ಮುಂಗಾರು ಬೆಳೆಗಳು ಹಾನಿಗೊಳಗಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸೆ. 4ರಂದು ತಾಲೂಕಿನ ರೈತರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಅಲೀಸಾಬ ನೂಲಗಿ, ಸುರೇಶ ಜಾಧವ, ಚಿದಂಬರಗೌಡ ಪಾಟೀಲ, ಅಮರ ಕುಲಕರ್ಣಿ, ಶ್ರೀಕಾಂತ್ ಹಟ್ಟಿಹೊಳ್ಳಿ, ಎಲ್‌.ಎಸ್‌. ನಾಯಕ್, ಪುಂಡಲೀಕ ಗೊರಗುದ್ದಿ, ಮಹಾಂತೇಶ ಚರಂತಿಮಠ, ಎಸ್‌.ವಿ. ಚಿಕ್ಕರಡ್ಡಿ, ಕೆ.ಎಂ. ಗುಡನಾಯ್ಕರ ಸೇರಿದಂತೆ ರೈತ ಮುಖಂಡರು ಪಾಲ್ಗೊಂಡಿದ್ದರು.