ಬಾಗೇವಾಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ

ಬಾಗೇವಾಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ  Demand to declare Bagewadi taluk a drought-hit area


ಬ್ಯಾಡಗಿ, ಸೆ.16: ತಾಲೂಕಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರವಾಗಿ ಹಿನ್ನಡೆ ಕಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಅಗತ್ಯ ಪರಿಹಾರ ಹಾಗೂ ನೆರವು ಒದಗಿಸಬೇಕು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.  ನಗರದ ಬಿಜೆಪಿ ಕಚೇರಿಯಿಂದ ನೂರಾರು ಕಾರ್ಯಕರ್ತರು ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿ, ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿದರು.  

ಪ್ರತಿಭಟನೆಯಲ್ಲಿ ಮಾತನಾಡಿದ ವಿರೂಪಾಕ್ಷಪ್ಪ ಬಳ್ಳಾರಿ, ಮಳೆಯ ಅಭಾವದಿಂದ ಬಿತ್ತನೆ ಮಾಡಿರುವ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಯನ್ನೇ ಅವಲಂಬಿಸಿರುವ ರೈತರು ಸಾಲದ ಹೊರೆ, ಬೆಳೆ ನಷ್ಟ ಹಾಗೂ ಮುಂದಿನ ದಿನಗಳ ಆತಂಕದಿಂದ ಕಂಗಾಲಾಗಿದ್ದಾರೆ. ರೈತರ ಕಣ್ಣೀರು ಒರೆಸಬೇಕಾದ ಸರ್ಕಾರ, ಅವರ ಕಣ್ಣಲ್ಲಿ ನೀರು ತುಂಬುವಂತಾಗಿದೆ ಎಂದು ಆರೋಪಿಸಿದರು.  

ಸರ್ಕಾರ ಹಾಗೂ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಪರಿಸ್ಥಿತಿ ಪರೀಶೀಲಿಸುವ ಬದಲು ಗ್ರಾಮೀಣ ಪ್ರದೇಶಗಳಿಗೆ ತೆರಳಿ ವಾಸ್ತವ ಸ್ಥಿತಿಯ ಸಮೀಕ್ಷೆ ನಡೆಸಬೇಕು. ಬೆಳೆ ನಷ್ಟವನ್ನು ವೈಜ್ಞಾನಿಕವಾಗಿ ಅಂದಾಜಿಸಿ ಅರ್ಹ ರೈತರಿಗೆ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.  

ತಾಲೂಕು ಅಧ್ಯಕ್ಷ ನಿಂಗಪ್ಪ ಬತ್ತಲಕಟ್ಟಿ ಮಾತನಾಡಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿಗೆ ಅಗತ್ಯವಿರುವ ನೀರಿನ ಸಮಸ್ಯೆ ಉಲ್ಬಣಿಸುವ ಮುನ್ನವೇ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ರೈತರ ಹಿತ ಕಾಪಾಡಲು ವಿಳಂಬ ಮಾಡದೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದರು.  

ನಿಕಟಪೂರ್ವ ಅಧ್ಯಕ್ಷ ಹಾಲೇಶ ಜಾದವ್ ಮಾತನಾಡಿ, ರೈತರ ಸಂಕಷ್ಟವನ್ನು ನಿರ್ಲಕ್ಷಿಸಿದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.  ಪ್ರತಿಭಟನೆಯಲ್ಲಿ ಹಿರಿಯ ಮುಖಂಡರಾದ ಶಿವಬಸಪ್ಪ ಕುಳೆನೂರ, ಶಿವಯೋಗಿ ಶಿರೂರು, ಬಸವರಾಜ ಛತ್ರದ, ಎಂ.ಎಸ್‌. ಪಾಟೀಲ, ವಿದ್ಯಾ ಶೆಟ್ಟಿ, ಗುತೇಪ್ಪ ತಿಮ್ಮಾಪುರ, ಹೇಮಂತ ಸರವಂದ, ದೇವಪ್ಪ ಭರಡಿ, ವೆಂಕಟೇಶ ಪಾಟೀಲ, ಹೊನ್ನಪ್ಪ ಬಾಕಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.