ವಿಜಯನಗರ ರೈತರ ಸಂಕಷ್ಟಕ್ಕೆ ತುರ್ತು ಪರಿಹಾರಕ್ಕೆ ಆಗ್ರಹ
Demand for urgent relief for Vijayanagara farmers facing distress
ಲೋಕದರ್ಶನ ವರದಿ
ವಿಜಯನಗರ 27 : ವಿಜಯನಗರ ಜಿಲ್ಲೆಯಲ್ಲಿ ಸುಮಾರು 7,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದ ಮೆಕ್ಕೆಜೋಳ, ಜೋಳ, ಹತ್ತಿ, ಈರುಳ್ಳಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳು ಮಳೆಯ ಕೊರತೆಯಿಂದ ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಪ್ರತಿ ಎಕರೆಗೆ 35 ಸಾವಿರದಿಂದ 40 ಸಾವಿರವರೆಗೆ ವೆಚ್ಚ ಮಾಡಿರುವ ರೈತರಿಗೆ ಸರ್ಕಾರ ಪ್ರತಿ ಎಕರೆಗೆ 50 ಸಾವಿರ ಪರಿಹಾರ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಸಹಕಾರಿ ಮತ್ತು ಖಾಸಗಿ ಬ್ಯಾಂಕ್ಗಳ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಕೂಡಲೇ ಅನುದಾನ ಬಿಡುಗಡೆ ಮಾಡಿ ರೈತರಿಗೆ ನೆರವು ನೀಡುವಂತೆ ಆಗ್ರಹಿಸಲಾಗಿದೆ. ಬ್ಯಾಂಕ್ಗಳಿಂದ ಸಾಲ ಮರುಪಾವತಿ ನೋಟಿಸ್ಗಳು ಹಾಗೂ ಸಿಬ್ಬಂದಿಯ ಒತ್ತಡದಿಂದ ರೈತರು ಮಾನಸಿಕವಾಗಿ ನೊಂದಿದ್ದು, ಈ ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸಬೇಕೆಂದು ಮನವಿ ಮಾಡಲಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಉದ್ಯೋಗದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಿರಂತರವಾಗಿ ಕೆಲಸ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ. ಹೊಸಪೇಟೆ ತಾಲೂಕಿನ ಸಕ್ಕರೆ ಕಾರ್ಖಾನೆ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ಸರ್ಕಾರ ನೀಡಿದ್ದ ಭರವಸೆಯಂತೆ ಅದನ್ನು ಪುನರಾರಂಭಿಸಿ ಕಬ್ಬು ಬೆಳೆಗಾರರಿಗೆ ನೆರವಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.
2024-25 ಹಾಗೂ 2025-26ನೇ ಸಾಲಿನ ಬೆಳೆ ವಿಮೆ ಪ್ರೀಮಿಯಂ ಪಾವತಿಸಿದ್ದರೂ ಪರಿಹಾರ ಸಿಗದಿರುವ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದು, ವಿಮಾ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಅಕ್ರಮ ಮಣ್ಣು ಸಾಗಾಟದಿಂದ ಕೃಷಿಭೂಮಿಗೆ ಹಾನಿಯಾಗುತ್ತಿರುವ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.
ಹೊಸಪೇಟೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳು ಸಮರ್ಕವಾಗಿ ನಡೆಯದ ಕಾರಣ ಹಲವು ಕೆರೆಗಳು ಬರಿದಾಗಿವೆ ಎಂದು ಆರೋಪಿಸಲಾಗಿದೆ. ಕಾಮಗಾರಿಗಳ ಗುಣಮಟ್ಟ ಪರೀಶೀಲಿಸಿ ಸೂಕ್ತ ಸಾಮರ್ಥ್ಯದ ಪಂಪ್ಗಳನ್ನು ಅಳವಡಿಸಿ ರೈತರಿಗೆ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಲಾಗಿದೆ.
ರಾಗಿ ಮತ್ತು ಜೋಳ ಖರೀದಿಸಿದ ರೈತರಿಗೆ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಜೋಳ ಖರೀದಿ ಮಿತಿಯನ್ನು 150 ಕ್ವಿಂಟಲ್ನಿಂದ 200 ಕ್ವಿಂಟಲ್ಗೆ ಹಾಗೂ ರಾಗಿ ಖರೀದಿ ಮಿತಿಯನ್ನು 50 ಕ್ವಿಂಟಲ್ನಿಂದ 75 ಕ್ವಿಂಟಲ್ಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ಜಿಲ್ಲೆಯ ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೆಳೆ ಹಾನಿ ಪರಿಹಾರ, ಸಾಲ ಮನ್ನಾ, ವಿಮೆ ಪರಿಹಾರ, ನೀರಾವರಿ ವ್ಯವಸ್ಥೆ ಸುಧಾರಣೆ ಹಾಗೂ ರೈತಪರ ಯೋಜನೆಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 