ಬೆಂಗಳೂರು ಉತ್ತರ ವಿವಿಯಲ್ಲಿ 'ನಾಲೆಡ್ಜ್‌ ಸಿಟಿ‌' ಸ್ಥಾಪನೆಗೆ ನಿರ್ಧಾರ: ಡಾ.ಅಶ್ವತ್ಥನಾರಾಯಣ

ದೇವನಹಳ್ಳಿ,ಫೆ.5 :  ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವನ್ನಾಗಿಸುವ ನಿಟ್ಟಿನಲ್ಲಿ ಹಲವು ಹೊಸ ಯೋಜನೆಗಳನ್ನು ಕೈಗೊಂಡಿದ್ದು, ಕ್ಯಾಂಪಸ್‌ನಲ್ಲಿ ನಾಲೆಡ್ಜ್‌ ಸಿಟಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಹೇಳಿದ್ದಾರೆ. 

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಅಮರಾವತಿ ಗ್ರಾಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣಕ್ಕೆ ನಿಗದಿಯಾಗಿರುವ ಸ್ಥಳವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.  

ಈ ಭಾಗದ ಜನರ ಬಹುದಿನಗಳ ಅಪೇಕ್ಷೆಯನ್ನು ಆದಷ್ಟು ಬೇಗ ಈಡೇರಿಸಲಾಗುವುದು. ವಿಶ್ವವಿದ್ಯಾಲಯಕ್ಕೆ ಪ್ರಸ್ತುತ 110 ಎಕರೆ ಜಾಗ ಲಭ್ಯವಾಗಿದ್ದು, 60 ಎಕರೆ ಖರೀದಿಗೆ ಪ್ರಕ್ರಿಯೆಗಳು ನಡೆದಿವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಈ ಪ್ರದೇಶದಲ್ಲೇ 'ನಾಲೆಡ್ಜ್‌ ಸಿಟಿ' ಸ್ಥಾಪಿಸಲು ಉದ್ದೇಶಿಸಲಾಗಿದೆ ವಿಶ್ವವಿದ್ಯಾಲಯಗಳಲ್ಲಿ ಸದಾ ಹೊಸತನ ಇರಬೇಕು. ಕಾಲ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ತರಬೇಕು. ಈ ನಿಟ್ಟಿನಲ್ಲಿ   ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವನ್ನಾಗಿಸಲು ಹೊಸ ಪ್ರಯತ್ನಗಳನ್ನು‌ನಡೆಸಲಾಗುವುದು ಎಂದು ಅವರು ತಿಳಿಸಿದರು. 

ದೇವನಹಳ್ಳಿಯಿಂದ ಕಾಲೇಜಿಗೆ ಬಿಎಂಟಿಸಿ ಬಸ್‌ ಸೌಲಭ್ಯ ಇಲ್ಲ ಎಂಬ ವಿದ್ಯಾರ್ಥಿಗಳ ಸಮಸ್ಯೆಗೆ ಕೂಡಲೇ ಸ್ಪಂದಿಸಿದ ಸಚಿವರು, ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ಈ ಸಂಬಂಧ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದರು.  ಲ್ಯಾಪ್‌ಟಾಪ್ ಹಾಗೂ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜಿಸಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ವಿ ಮುನಿಯಪ್ಪ,  ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆಂಪರಾಜು ಉಪಸ್ಥಿತರಿದ್ದರು.