ಅಮರನಾಥ ಶೆಟ್ಟಿ ನಿಧನ: ಮುಖ್ಯಮಂತ್ರಿ ಸೇರಿ ಗಣ್ಯರ ಸಂತಾಪ

ಬೆಂಗಳೂರು,ಜ 27ಮಾಜಿ ಸಚಿವ ಅಮರನಾಥ ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ರಾಮಕೃಷ್ಣ  ಹೆಗಡೆ ಹಾಗೂ ಜೆ. ಎಚ್. ಪಟೇಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದ ಅಮರನಾಥ ಶೆಟ್ಟಿ ಅವರು  ಒಬ್ಬ ಸರಳ ಸಜ್ಜನ ರಾಜಕಾರಣಿ ಆಗಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ  ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು  ಪ್ರಾರ್ಥಿಸು ವುದಾಗಿ ಮುಖ್ಯಮಂತ್ರಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಮ್ಮ ಸಂತಾಪ ಸೂಚಕದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಅಮರನಾಥ ಶೆಟ್ಟಿ ಅವರ ಅಗಲಿಕೆಯಿಂದ ತೀವ್ರ  ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಭಗವಂತ ಈ  ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ಜಾತ್ಯತೀತ ಜನತಾ ದಳದ ಹಿರಿಯ ನಾಯಕ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಜನತಾದಳದಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಶೆಟ್ಟರು ತಮ್ಮ ಸರಳ-ಸಜ್ಜನಿಕೆಯ ಸ್ವಭಾವದಿಂದ ಜನಾನುರಾಗಿಯಾಗಿದ್ದರು. ಇವರ ಸಾವಿನ ಶೋಕದಲ್ಲಿರುವ ಕುಟುಂಬ ವರ್ಗದ ಜೊತೆ ನಾನೂ ಭಾಗಿಯಾಗಿದ್ದೇನೆ, ನನ್ನ ಸಂತಾಪಗಳು ಎಂದು  ತಿಳಿಸಿದ್ದಾರೆ. ಮಾತ್ರವಲ್ಲ ಅಮರನಾಥ ಶೆಟ್ಟಿ ಅವರೊಂದಿಗೆ ಇದ್ದ ಹಳೆಯ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ.

ಮಾಜಿ  ಸಚಿವರು ಹಾಗೂ ಮೃದು ಮನಸ್ಸಿನ ಸರಳ ರಾಜಕಾರಣಿಯಾಗಿರುವ ನಮ್ಮ ಪಕ್ಷದ ಹಿರಿಯ ಮುಖಂಡರಾದ  ಅಮರನಾಥಶೆಟ್ಟಿಯವರು ವಿಧಿವಶರಾಗಿರುವುದು ತೀವ್ರ ದುಃಖ ತಂದಿದೆ.ಅವರ ನಿಧನದಿಂದ ನಾವು  ಸಜ್ಜನರೊಬ್ಬರನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ‌ ನೀಡಲಿ ಮತ್ತು  ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಪ್ರಾರ್ಥಿಸುವುದಾಗಿ  ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.