ಹೈನುಗಾರಿಕೆ ರೈತರ ಬದುಕಿನ ಜೀವಾಳ: ವೀರಣ್ಣ ಕೌಜಲಗಿ

    ಹೈನುಗಾರಿಕೆ ರೈತರ ಬದುಕಿನ ಜೀವಾಳ: ವೀರಣ್ಣ ಕೌಜಲಗಿ  Dairy farming is the lifeline of farmers' lives: Veeranna Kaujalagi

ಲೋಕದರ್ಶನ ವರದಿ 

ಬೆಟಗೇರಿ 23: ಸ್ಥಳೀಯ ರೈತರು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೆಎಂಎಫ್ನಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ಹಲವು ಸಹಾಯ ಹಾಗೂ ಸೌಲಭ್ಯಗಳಿದ್ದು, ರೈತರು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಗೋಕಾಕ ಘಟಕ ಉಪಕೇಂದ್ರದ ಅಧಿಕಾರಿ ವೀರಣ್ಣ ಕೌಜಲಗಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸೆ.23ರಂದು ನಡೆದ 2025-26ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಹೈನುಗಾರಿಕೆ ರೈತರ ಬದುಕಿನ ಜೀವಾಳವಾಗಿದೆ ಎಂದು ಹೇಳಿದರು.

ಬೆಳಗಾವಿ ಹಾಲು ಒಕ್ಕೂಟದಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ರೈತರಿಗೆ ದೊರೆಯುವ ವಿವಿಧ ಸಹಾಯಧನ ಹಾಗೂ ಸೌಲಭ್ಯಗಳ ಕುರಿತು ಅವರು ಮಾಹಿತಿ ನೀಡಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ನಿಂಗಪ್ಪ ನೀಲನವರ ವಾರ್ಷಿಕ ವರದಿ ಮಂಡಿಸಿ, 2025-26ನೇ ಸಾಲಿನಲ್ಲಿ ಸಂಘವು 29,90,611 ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ಸಂಘದ ಷೇರು ಸದಸ್ಯರಿಗೆ ಶೇ.20ರಷ್ಟು, 43,600 ಡಿವಿಡೆಂಡ್ ಹಾಗೂ ಶೇ.65ರಷ್ಟು, ಒಟ್ಟು 14,00,424 ಬೋನಸ್ ವಿತರಿಸಲಾಗುವುದು ಎಂದರು. ಸ್ಥಳೀಯ ಸಂಘದ ಅಧ್ಯಕ್ಷ ಸಿದ್ದೇಶ್ವರ ಕುರಬೆಟ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಷೇರು ಸದಸ್ಯರು, ಗ್ರಾಹಕರು, ಗ್ರಾಮಸ್ಥರು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.