ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ ಡಿಪಿಆರ್‌ಗೆ ಮಂಜೂರಾತಿ; ಕಾಮಗಾರಿ ತ್ವರಿತಗೊಳಿಸಲು ಹೋರಾಟ ಸಮಿತಿ ಆಗ್ರಹ

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ ಡಿಪಿಆರ್‌ಗೆ ಮಂಜೂರಾತಿ; ಕಾಮಗಾರಿ ತ್ವರಿತಗೊಳಿಸಲು ಹೋರಾಟ ಸಮಿತಿ ಆಗ್ರಹ DPR Approved for Vijayapura Government Medical College; Agitation Committee Urges Expediting Constru

ವಿಜಯಪುರ, ಆಗಸ್ಟ್ 19: ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (DPR) ಸಿದ್ಧಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅದಕ್ಕೆ ಮಂಜೂರಾತಿ ದೊರೆತಿದೆ. ಅಲ್ಲದೆ, ಕಾಲೇಜಿನ ಅಧಿಕೃತ ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ವಿಜಯಪುರದಲ್ಲಿ ನಡೆದ 116 ದಿನಗಳ ಐತಿಹಾಸಿಕ ಹೋರಾಟದ ಮುಂದುವರಿದ ಭಾಗವಾಗಿ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಸದಸ್ಯರು ಬುಧವಾರ ನೂತನವಾಗಿ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿರುವ ಡಾ. ಜಾನಕಿ ತೊರವಿ ಅವರನ್ನು ಭೇಟಿ ಮಾಡಿ ಕಾಲೇಜು ಸ್ಥಾಪನೆಯ ಪ್ರಸ್ತುತ ಸ್ಥಿತಿಗತಿ ಕುರಿತು ಸಮಗ್ರ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ ಡಿಪಿಆರ್ ಸಂಪೂರ್ಣವಾಗಿ ಸಿದ್ಧಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅನುಮೋದನೆಯೂ ದೊರೆತಿದೆ. ಕಾಲೇಜಿನ ನೋಂದಣಿ ಪ್ರಕ್ರಿಯೆಯೂ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಡಾ. ಜಾನಕಿ ತೊರವಿ ಅವರು ಸಮಿತಿಯ ಸದಸ್ಯರಿಗೆ ತಿಳಿಸಿದರು.

ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ನಡೆದ ಹೋರಾಟವು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನಡೆದಿದ್ದು, ಜಿಲ್ಲೆಯ ಜನತೆ, ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಿಕಲಚೇತನರ ಸಂಘಟನೆಗಳು ಹಾಗೂ ಬಹುತೇಕ ಜನಪ್ರತಿನಿಧಿಗಳ ಬೆಂಬಲ ದೊರೆತಿತ್ತು. ಹೋರಾಟದ ಸಂದರ್ಭದಲ್ಲಿ ಜನವರಿ 1ರಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ 27 ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಪೈಕಿ ಆರು ಮಂದಿಯನ್ನು 14 ದಿನಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಜನವರಿ 9ರಂದು ವಿಜಯಪುರಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಅವರು ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಘೋಷಿಸಿದ್ದರು.

2026-27ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಅರ್ಥ ಸಚಿವ ಸಿದ್ದರಾಮಯ್ಯ ಅವರು ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿಸ್ತೃತ ಯೋಜನಾ ವರದಿ ಪಡೆದು ಮುಂದುವರಿಯುವುದಾಗಿ ಘೋಷಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಕೂಡ ಸರ್ಕಾರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿಯೇ ತೀರುತ್ತದೆ ಎಂದು ಭರವಸೆ ನೀಡಿದ್ದರು.

ಈ ಕುರಿತು ಮಾತನಾಡಿದ ಹೋರಾಟ ಸಮಿತಿಯ ಹಿರಿಯ ಸದಸ್ಯ ಡಾ. ಬಿ. ಭಗವಾನ್ ರೆಡ್ಡಿ, “ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆದಷ್ಟು ಬೇಗ ನಿರ್ಮಾಣಗೊಳ್ಳಬೇಕು. ಮುಂಬರುವ ಶೈಕ್ಷಣಿಕ ವರ್ಷದಲ್ಲೇ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಹಂತದ ಎಲ್ಲ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಈ ಮೂಲಕ ಜಿಲ್ಲೆಯ ಜನರು ಹಾಗೂ ಹೋರಾಟಗಾರರ ಬಹುದಿನಗಳ ಕನಸು ನನಸಾಗಬೇಕು” ಎಂದು ಒತ್ತಾಯಿಸಿದರು.

ವಿಜಯಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಜಿಲ್ಲೆಯ ಜನರ ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲದ ಕನಸಾಗಿದೆ. ಇದೀಗ ಡಿಪಿಆರ್‌ಗೆ ಮಂಜೂರಾತಿ ದೊರೆತಿದ್ದು, ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಂಡಿರುವುದು ಸಂತಸದ ಸಂಗತಿಯಾಗಿದೆ. ಮುಂದಿನ ಹಂತದ ಆಡಳಿತಾತ್ಮಕ ಪ್ರಕ್ರಿಯೆಗಳು ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ವೇಗ ನೀಡಬೇಕಾಗಿದೆ ಎಂದು ಸಮಿತಿ ತಿಳಿಸಿದೆ.

ಬರುವ ಶೈಕ್ಷಣಿಕ ವರ್ಷಾರಂಭದಲ್ಲೇ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು. ಜಿಲ್ಲೆಯ ಜನರ ಸುವರ್ಣ ಕನಸನ್ನು ಶೀಘ್ರ ಸಾಕಾರಗೊಳಿಸಬೇಕು ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಅಕ್ರಮ್ ಮಾಶಾಳ್ಕರ್, ನೀಲಂಬಿಕಾ ಬಿರಾದಾರ್, ಭೋಗೇಶ್ ಸೋಲಾಪುರ್, ಲಕ್ಷ್ಮಣ್ ಹಂದರಾಳ್, ಗಿರೀಶ್ ಕಲಘಟಗಿ, ಜಗದೇವ್ ಸೂರ್ಯವಂಶಿ, ಬಾಳು ಜೇವೂರ್, ಬಿ.ಎಸ್. ಬೀರಕಬ್ಬಿ, ಮಲ್ಲಿಕಾರ್ಜುನ್ ಎಚ್.ಟಿ., ಶ್ರೀನಾಥ್ ಪೂಜಾರಿ, ಡಾ. ಎಂ.ಆರ್. ಗುರಿಕಾರ್, ಸಿದ್ದರಾಮ್ ಹಳ್ಳೂರ್, ಸುರೇಶ್ ಜಿ.ಬಿ., ಸುರೇಶ್ ಬಿಜಾಪುರ, ಲಲಿತಾ ಬಿಜ್ಜರಗಿ, ಲಕ್ಷ್ಮಣ್ ಕಂಬಾಗಿ, ಲಿಂಗರಾಜ್ ಬಿದರಕುಂದಿ, ಸಂತೋಷ್ ನಾಯಕ್, ಬಾಬಾಸಾಹೇಬ್ ಹತ್ತರಕಿಹಾಳ್, ಜ್ಯೋತಿ ಮಿಣಜಿಗಿ, ಸುಶೀಲಾ ಮಿಣಜಿಗಿ, ಭಾಗ್ಯ ಗಡದಿನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.