ಬೆಂಗಳೂರಿನಲ್ಲಿ ಅಕ್ರಮ ಪಾನ್ ಮಸಾಲಾ, ತಂಬಾಕು ತಯಾರಿಕಾ ಘಟಕಗಳ ಮೇಲೆ ಡಿಜಿಜಿಐ ದಾಳಿ

ಬೆಂಗಳೂರಿನಲ್ಲಿ ಅಕ್ರಮ ಪಾನ್ ಮಸಾಲಾ, ತಂಬಾಕು ತಯಾರಿಕಾ ಘಟಕಗಳ ಮೇಲೆ ಡಿಜಿಜಿಐ ದಾಳಿ DGGI Bengaluru Busts Clandestine Pan Masala, Tobacco Manufacturing Units

ಬೆಂಗಳೂರು, ಆ. 22: ಬೆಂಗಳೂರಿನ ಹೊರವಲಯದಲ್ಲಿ ಅಕ್ರಮವಾಗಿ ಪಾನ್ ಮಸಾಲಾ ಮತ್ತು ಜಗಿಯುವ ತಂಬಾಕು ತಯಾರಿಸುತ್ತಿದ್ದ ಜಾಲವನ್ನು ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾನಿರ್ದೇಶನಾಲಯದ (ಡಿಜಿಜಿಐ) ಬೆಂಗಳೂರು ವಲಯ ಘಟಕ ಪತ್ತೆಹಚ್ಚಿದೆ. ಕಾರ್ಯಾಚರಣೆಯಲ್ಲಿ ಒಂಬತ್ತು ಪೌಚ್ ಪ್ಯಾಕಿಂಗ್ ಯಂತ್ರಗಳು, 1.66 ಲಕ್ಷ ಸಿದ್ಧಪಡಿಸಿದ ಪೌಚ್‌ಗಳು ಹಾಗೂ ಸುಮಾರು 8.4 ಟನ್‌ಗಳಷ್ಟು ಕಚ್ಚಾ ಮತ್ತು ಅರೆಸಂಸ್ಕರಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಡಿಜಿಜಿಐ ಅಧಿಕಾರಿಗಳು ಆಗಸ್ಟ್ 19ರಂದು ರಹಸ್ಯ ನಿಗಾ ಕಾರ್ಯಾಚರಣೆ ನಡೆಸಿದ ಬಳಿಕ ಎರಡು ವಾಣಿಜ್ಯ ಆವರಣಗಳು ಮತ್ತು ಒಂದು ವಸತಿ ಆವರಣದ ಮೇಲೆ ಶೋಧ ನಡೆಸಿದರು. ಎರಡೂ ವಾಣಿಜ್ಯ ಸ್ಥಳಗಳಲ್ಲಿ ಪಾನ್ ಮಸಾಲಾ ಮತ್ತು ಜಗಿಯುವ ತಂಬಾಕು ತಯಾರಿಸಲಾಗುತ್ತಿತ್ತು ಎಂದು ಅಧಿಕಾರಿಗಳು ಪತ್ತೆಹಚ್ಚಿದರು.

ಇವುಗಳಲ್ಲಿ ಒಂದು ಘಟಕ ಜಿಎಸ್‌ಟಿ ನೋಂದಣಿ ಹೊಂದಿದ್ದರೂ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿರಲಿಲ್ಲ. ಮತ್ತೊಂದು ಘಟಕ ಯಾವುದೇ ಜಿಎಸ್‌ಟಿ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ನೋಂದಾಯಿತ ಘಟಕದಿಂದ ಆರು ವರ್ಟಿಕಲ್ ಫಾರ್ಮ್-ಫಿಲ್-ಅಂಡ್-ಸೀಲ್ ಪೌಚ್ ಪ್ಯಾಕಿಂಗ್ ಯಂತ್ರಗಳು, ಎರಡು ಮಿಶ್ರಣ ಯಂತ್ರಗಳು, ಬ್ಲೋವರ್-ಕಮ್-ರೋಸ್ಟರ್, ಹೀಟ್ ಸೀಲಿಂಗ್ ಯಂತ್ರ, ಕಾಥಾ ಪುಡಿ ಮಾಡುವ ಯಂತ್ರ ಮತ್ತು ನಗದು ಎಣಿಸುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ನಾಲ್ಕು ಬ್ರ್ಯಾಂಡ್‌ಗಳಿಗೆ ಸೇರಿದ 1,66,060 ಸಿದ್ಧಪಡಿಸಿದ ಪಾನ್ ಮಸಾಲಾ ಮತ್ತು ಜಗಿಯುವ ತಂಬಾಕಿನ ಪೌಚ್‌ಗಳು, 801.5 ಕೆ.ಜಿ. ಸಡಿಲ ಪಾನ್ ಮಸಾಲಾ, ಸುಮಾರು 5.4 ಟನ್ ಕಚ್ಚಾ ವಸ್ತು ಹಾಗೂ ಸುಮಾರು 515 ಕೆ.ಜಿ. ಮುದ್ರಿತ ಪ್ಯಾಕಿಂಗ್ ಲ್ಯಾಮಿನೇಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕಚ್ಚಾ ವಸ್ತುಗಳಲ್ಲಿ ಮುರಿದ ಅಡಿಕೆ, ಮುಲೇಠಿ, ಕಾಥಾ, ಸುಣ್ಣ ಮತ್ತು ವಿವಿಧ ಸುವಾಸನಾ ಸಂಯುಕ್ತಗಳು ಸೇರಿವೆ.

ಘಟಕವು ತನ್ನ ಗುರುತನ್ನು ಮರೆಮಾಚಲು ಪ್ರಯತ್ನಿಸಿರುವುದನ್ನೂ ಡಿಜಿಜಿಐ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆವರಣದಲ್ಲಿ ಪ್ರದರ್ಶಿಸಲಾಗಿದ್ದ 15 ಅಂಕಿಗಳ ಜಿಎಸ್‌ಟಿ ನೋಂದಣಿ ಸಂಖ್ಯೆ ಅಮಾನ್ಯವಾಗಿದ್ದು, ಘಟಕ ಹೊಂದಿದ್ದ ನಿಜವಾದ ನೋಂದಣಿ ಸಂಖ್ಯೆಯಿಂದ ಒಂದು ಅಕ್ಷರದಲ್ಲಿ ವ್ಯತ್ಯಾಸವಿತ್ತು.

ಎರಡನೇ ಆವರಣದಲ್ಲಿ ಮೂರು ಪ್ಯಾಕಿಂಗ್ ಮತ್ತು ಫಿಲ್ಲಿಂಗ್ ಯಂತ್ರಗಳ ಜತೆಗೆ ಶ್ರೆಡ್ಡಿಂಗ್, ಜರಡಿ, ಮಿಶ್ರಣ, ಹುರಿಯುವಿಕೆ ಮತ್ತು ಸೀಲಿಂಗ್ ಉಪಕರಣಗಳು ಹಾಗೂ ಎರಡು ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಪತ್ತೆಹಚ್ಚಲಾಗಿದೆ. ಅಲ್ಲಿಂದ ಸುಮಾರು 3,052 ಕೆ.ಜಿ. ಕಚ್ಚಾ ಮತ್ತು ಅರೆಸಂಸ್ಕರಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಿಗಾದಲ್ಲಿದ್ದ ಪ್ರಮುಖ ಆರೋಪಿಯ ನಿವಾಸದ ಮೇಲೂ ಏಕಕಾಲದಲ್ಲಿ ಶೋಧ ನಡೆಸಲಾಯಿತು. ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಆರೋಪಿಸಲಾದ ನೋಂದಾಯಿತ ಘಟಕದ ಮಾಲೀಕರನ್ನು ಬಂಧಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಇನ್‌ವಾಯ್ಸ್‌ಗಳು ಅಥವಾ ಇ-ವೇ ಬಿಲ್‌ಗಳಿಲ್ಲದೆ ಜಗಿಯುವ ತಂಬಾಕು, ಖೈನಿ ಮತ್ತು ಪಾನ್ ಮಸಾಲಾವನ್ನು ಅಂತರರಾಜ್ಯ ಮಟ್ಟದಲ್ಲಿ ಅಕ್ರಮವಾಗಿ ಸಾಗಣೆ ಹಾಗೂ ಪೂರೈಕೆ ಮಾಡುತ್ತಿದ್ದ ಜಾಲದ ವಿರುದ್ಧ ಡಿಜಿಜಿಐ ನಡೆಸುತ್ತಿರುವ ವ್ಯಾಪಕ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ.

ಜುಲೈ 15ರಿಂದ 17ರವರೆಗೆ ಬೆಂಗಳೂರು ವಲಯ ಘಟಕವು ನಾಲ್ಕು ರೈಲು ನಿಲ್ದಾಣಗಳಲ್ಲಿ ಐದು ರೈಲುಗಳಿಂದ ಸುಮಾರು 42 ಲಕ್ಷ ಪಾನ್ ಮಸಾಲಾ ಮತ್ತು ತಂಬಾಕು ಪೌಚ್‌ಗಳನ್ನು ವಶಪಡಿಸಿಕೊಂಡಿತ್ತು. ಇದರ ಜೊತೆಗೆ ಎರಡು ಟ್ರಕ್‌ಗಳು ಮತ್ತು ಒಂದು ಗೋದಾಮಿನ ಮೇಲೂ ಕಾರ್ಯಾಚರಣೆ ನಡೆಸಲಾಗಿತ್ತು. ಈ ಸರಕುಗಳು ದೆಹಲಿಯಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು.

ತನಿಖೆಯ ವೇಳೆ ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ನಾಟಕ ಪೊಲೀಸರು ವಶಪಡಿಸಿಕೊಂಡಿದ್ದ ಇನ್ನೂ ಮೂರು ಪಾನ್ ಮಸಾಲಾ ಮತ್ತು ತಂಬಾಕು ತಯಾರಿಕಾ ಯಂತ್ರಗಳಿಗೆ ಸಂಬಂಧಿಸಿದ ಪ್ರಕರಣವನ್ನೂ ಡಿಜಿಜಿಐಗೆ ವರ್ಗಾಯಿಸಲಾಗಿದೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.