ಡಿ.ದೇವರಾಜ ಅರಸು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ನಾಯಕ: ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ
D. Devaraj Aras' 110th birth anniversary celebration program: Haveri
ಹಾವೇರಿ 20: ಡಿ.ದೇವರಾಜ ಅರಸು ಅವರು ನಾಡು ಕಂಡ ದಾರ್ಶನಿಕ ರಾಜಕಾರಣಿ, ಗಾಂಧೀಜಿ ಹಾಗೂ ಲೋಹಿಯಾ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡವರು. ವಿಶೇಷವಾಗಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ನಾಯಕ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶೋಷಿತರ ಅಭಿವೃದ್ಧಿ ಹರಿಕಾರ, ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಡಿ.ದೇವರಾಜು ಅರಸುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯ ಹಾಗೂ ರಾಷ್ಟ್ರದ ಚುಕ್ಕಾಣಿ ಹಿಡಿದ ನಾಯಕರು ಯಾವ ರೀತಿ ಇರಬೇಕು ಎಂಬುದಕ್ಕೆ ಡಿ.ದೇವರಾಜ ಅರಸು ಅವರು ಮಾದರಿಯಾಗಿದ್ದಾರೆ ಎಂದು ಹೇಳಿದರು.
ಭೂ ಸುಧಾರಣೆ ಕಾಯ್ದೆ, ಉಳುವವನೆ ಹೊಲದೊಡೆಯ, ಜೀತಮುಕ್ತ ಪದ್ಧತಿ ಹಾಗೂ ತಲೆ ಮೇಲೆ ಮಲಹೊರುವ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ಶೋಷಿತರ ಧ್ವನಿಯಾಗಿದ್ದರು. ಬಡ ಕೂಲಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿಗೆ ತಂದರು, ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕಾರಣ ಮಾಡಿದರು ಹಾಗೂ ಕನ್ನಡ ಆಡಳಿತ ಭಾಷೆಯನ್ನಾಗಿಸಿದವರು. ಅವರ ಆಡಳಿತ ಪ್ರಗತಿಪರ ಆಡಳಿತವಾಗಿತ್ತು ಎಂದು ಹೇಳಿದರು.
ಕಲಾವಿದರ ಮಾಶಾಸನ, ವೃದ್ಧಾಪ್ಯ, ವಿಕಲಚೇತನ, ವೇತನ ಮಾಶಾಸನ, ವಸತಿ ನಿಲಯ ಹೀಗೆ ಹಲವಾರು ಜನಪರ ಯೋಜನೆಗಳನ್ನು ಅಸ್ತಿತ್ವಕ್ಕೆ ತಂದ ಅರಸು ಅವರು, ಹಿಂದುಳಿದ ವರ್ಗದ ಜನರು ಹೊಸ ಬದುಕು ಕಟ್ಟಿಕೊಂಡು ಹೊಸ ಚೈತನ್ಯದಿಂದ ಬದುಕಲು ರೂವಾರಿಗಳಾದರು ಎಂದು ಹೇಳಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಂದಿದ ಅವರು, ಬಡವರ, ದೀನದಲಿತರ, ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಆಲಿಸುತ್ತಿದ್ದರು, ತಮ್ಮ ಆಡಳಿತ ಅವಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಅವರನ್ನು ಪರಿವರ್ತನೆ ಹರಿಕಾರ ಎಂದು ಬಣ್ಣಿಸಲಾಗುತ್ತದೆ. ನಾಡಿಗೆ ದೇವರಾಜ ಅರಸು ಅಪಾರ ಕೊಡುಗೆ ನೀಡಿದ್ದಾರೆ. ಯುವ ರಾಜಕಾರಣಿಗಳು ಹಾಗೂ ಯುವ ಸಮೂಹ ಅವರ ಆದರ್ಶ ಮೌಲ್ಯಗಳನ್ನು ಪಾಲಿಸಬೇಕು ಹಾಗೂ ಅವರು ಹಾಕಿದ ಹಾದಿಯಲ್ಲಿ ನಡೆದಾಗ ಅವರ ಜನ್ಮ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಭಾಗವಹಿಸಿದ ಶಿಗ್ಗಾಂವ ಚನ್ನಪ್ಪ ಕನ್ನೂರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಅವರು ಮಾತನಾಡಿ, ಡಿ.ದೇವರಾಜ ಅರಸು ಅವರು ಹೇಳಿದ್ದನ್ನು ಮಾಡಿದ ಧೀಮಂತ ನಾಯಕ. ಜನಪರ ಆಲೋಚನೆ ಮಾಡಿದವರು, ಕೆಳವರ್ಗದ ಜನರಿಗೆ ನ್ಯಾಯ ಒದಗಿಸುವ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರ ಹಾಗೂ ಶೋಷಿತರ ಧ್ವನಿಯಾದವರು. ಎಲ್.ಜಿ.ಹಾವನೂರ ಆಯೋಗ ರಚನೆ ಮಾಡಿದರು. 1952 ರಿಂದ ಸತತ 28 ವರ್ಷ ಹುಣಸೂರ ಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು ಎಂಟು ವರ್ಷ ರಾಜ್ಯ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದರು ಎಂದು ಹೇಳಿದರು.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಮೈದೂರ ಅವರು ಮಾತನಾಡಿ, ಡಿ.ದೇವರಾಜ ಅರಸು ಅವರು ರೈತರಿಗೆ, ವಿದ್ಯಾರ್ಥಿಗಳಿಗೆ, ಬಡ ಕೂಲಿಕಾರರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡರು. ಅವರ ಆದರ್ಶ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜೀಗೌಡ್ರ ಅವರು ಮಾತನಾಡಿ, ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದ ದಕ್ಷ ಆಡಳಿತಗಾರ ಎಂದು ಬಣ್ಣಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ: ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ವಸತಿ ನಿಲಯಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ಡಿ.ದೇವರಾಜ ಅರಸು ಜೀವನದ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎಚ್.ವೈ.ಮೀಸೆ, ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಆರ್.ಸುಬ್ರಾ ನಾಯ್ಕ್, ತಹಶೀಲ್ದಾರ ಶ್ರೀಮತಿ ಶರಣಮ್ಮ, ನಗರಸಭೆ ಆಯುಕ್ತ ಎಚ್.ಕಾಂತರಾಜು, ಅಲೆಮಾರಿ ಅರೆ ಅಲೆಮಾರಿ ಒಕ್ಕೂಟ ಉಪಾಧ್ಯಕ್ಷ ಹಲಗಣ್ಣ ಜಾಡ, ಎಂ.ಎಚ್.ಕೋರಿಶೆಟ್ಟರ, ರಮೇಶ ಆನವಟ್ಟಿ, ಚನ್ನಪ್ಪ ಇತರರು ಉಪಸ್ಥಿತರಿದ್ದರು. ಎಂ.ಬಿ.ಪಾಟೀಲ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 