40ಕ್ಕೂ ಅಧಿಕ ಜನರಿಂದ ಬೆಳೆ ನಾಶ: ದಲಿತ ಮಹಿಳೆಗೆ ನ್ಯಾಯ ಒದಗಿಸಲು ಆಗ್ರಹ
Crop destruction by over 40 people: Demand for justice for Dalit woman
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ 18 : ದಗದಾಳ ಗ್ರಾಮದ ರಾಧವ್ವ ಗಂಡ ಸದಾಶಿವ ಕಾಂಬಳೆ ಅವರ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ 40ಕ್ಕೂ ಅಧಿಕ ಮಂದಿ ಅಕ್ರಮವಾಗಿ ಪ್ರವೇಶಿಸಿ ಬೆಳೆ ನಾಶಪಡಿಸಿ, ಹೊಲದ ಬದುವಿಗೆ ಬೆಂಕಿ ಹಚ್ಚಿ, ಕಬ್ಬು ಹಾಗೂ ಗೋವಿನ ಜೋಳದ ಬೆಳೆಯನ್ನು ಕತ್ತರಿಸಿ ಹಾಕಿರುವ ಘಟನೆ ನಡೆದಿದೆ. ಅಲ್ಲದೆ, ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂದು ರಾಧವ್ವ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ರಾಧವ್ವ ಅವರ ಪ್ರಕಾರ, ಅವರು ಹೊಲದ ಪತ್ರಾಸ್ ಶೆಡ್ನಲ್ಲಿ ಮಲಗಿದ್ದ ವೇಳೆ ಗ್ರಾಮದ ಪರಶುರಾಮ ಬಾಳಪ್ಪ ಬಸವ್ವಗೋಳ ಅವರ ನೇತೃತ್ವದಲ್ಲಿ 40ಕ್ಕೂ ಅಧಿಕ ಮಂದಿ ಕಟಾವುಳಿಗಳು ಸ್ಥಳಕ್ಕೆ ಬಂದಿದ್ದರು. ತಮ್ಮ ಮಕ್ಕಳನ್ನು ಕರೆಸುವಷ್ಟರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಎದುರೇ ಬೆಳೆ ಕೊಯ್ದು, ಹೊಲದ ಬದುವಿನಲ್ಲಿದ್ದ ಮರಗಳಿಗೆ ಬೆಂಕಿ ಹಚ್ಚಿ, ಬೆದರಿಕೆ ಹಾಕಲಾಗಿದೆ ಎಂದು ಅವರು ದೂರಿದರು. ಈ ಕುರಿತು ಫೋಟೋ ಮತ್ತು ವಿಡಿಯೊ ದಾಖಲೆಗಳೂ ಇವೆ ಎಂದು ತಿಳಿಸಿದರು.
ಪರಶುರಾಮ ಬಸವ್ವಗೋಳ ಅವರು ಬಿಜೆಪಿ ಮುಖಂಡರಾಗಿದ್ದು, ಜಿಪಂ ಮಾಜಿ ಸದಸ್ಯರೂ ಆಗಿದ್ದಾರೆ ಎಂದು ರಾಧವ್ವ ಆರೋಪಿಸಿದರು. ದಲಿತ ಮಹಿಳೆಗೆ ಸೇರಿದ ಒಂದು ಎಕರೆ ಜಮೀನಿನ ಬೆಳೆ ಹಾನಿ ಮಾಡಿ ಬೆಂಕಿ ಹಚ್ಚಿದ ಕುರಿತು ಬನಹಟ್ಟಿ ಪಿಎಸ್ಐ ಶಿವರಾಜ ಧರಿಗೊಂಡ ಅವರಿಗೆ ದೂರು ನೀಡಲು ಮುಂದಾದರೂ, ದೂರು ಸ್ವೀಕರಿಸಿಲ್ಲ ಎಂದು ಅವರು ಆರೋಪಿಸಿದರು.
ನ್ಯಾಯಕ್ಕಾಗಿ ಸಿಪಿಐ ಹಾಗೂ ಡಿವೈಎಸ್ಪಿ ಜಮಖಂಡಿ ಅವರನ್ನು ಭೇಟಿ ಮಾಡಿ ದೂರು ದಾಖಲಿಸಿಕೊಂಡು ಮಹಿಳೆಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರೂ, ಇದುವರೆಗೆ ಬನಹಟ್ಟಿ ಠಾಣಾಧಿಕಾರಿಗಳು ದೂರು ದಾಖಲಿಸಿಕೊಂಡಿಲ್ಲ ಎಂದು ರಾಧವ್ವ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ದಸಂಸ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಅವರು ಎಸ್ಪಿ ಅವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ನೊಂದ ಮಹಿಳೆಗೆ ರಕ್ಷಣೆ ಹಾಗೂ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲೂಕು ಸಂಚಾಲಕ ಬಸವರಾಜ ದೊಡಮನಿ, ದೀಪಕ ಕಂಕಣವಾಡಿ, ಮುತ್ತಪ್ಪ ಹರಿಜನ, ಧರ್ಮಣ್ಣ ಕಾಂಬಳೆ, ರವಿ ಸುತಾರ, ಸದಾಶಿವ ಐನಾಪುರ, ಪರಶುರಾಮ ಕಾಂಬಳೆ, ಶಿವನಿಂಗ ಕಾಂಬಳೆ, ವಿಠಲ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 