ಎಸ್‌ಐಆರ್ ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ: ಶಿವಲಿಂಗ ರೆಡ್ಡಿ

ಎಸ್‌ಐಆರ್ ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ: ಶಿವಲಿಂಗ ರೆಡ್ಡಿ  Create public awareness about the SIR process: Shivalinga Reddy

ಬಳ್ಳಾರಿ 13: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಎನ್ಯೂಮರೇಷನ್ ನಮೂನೆಗಳನ್ನು ಭರ್ತಿ ಮಾಡುವ ಕುರಿತು ಮಾಹಿತಿ ಹೊಂದಿರುವವರು ತಮ್ಮ ಸಂಬಂಧಿಕರು, ನೆರೆಹೊರೆಯವರು, ಪರಿಚಯಸ್ಥರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಗೊಂದಲ ನಿವಾರಣೆಗೆ ಸಹಕರಿಸಬೇಕು ಎಂದು ಜಿಲ್ಲಾ ಮಾಸ್ಟರ್ ತರಬೇತುದಾರ ಶಿವಲಿಂಗ ರೆಡ್ಡಿ ಹೇಳಿದರು.  

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಅಬಕಾರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಬಿಡ್ದಾರರು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಎಸ್‌ಐಆರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಎಸ್‌ಐಆರ್ನ ಮುಖ್ಯ ಉದ್ದೇಶ ಪ್ರಸ್ತುತ ಜಾರಿಯಲ್ಲಿರುವ ಮತದಾರರ ಪಟ್ಟಿಯನ್ನು ಆಧರಿಸಿ ಹೊಸದಾಗಿ, ನಿಖರ ಹಾಗೂ ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದಾಗಿದೆ. ಈ ಪ್ರಕ್ರಿಯೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.  

ಇತರ ರಾಜ್ಯಗಳಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ತಾಂತ್ರಿಕ ಕಾರಣಗಳಿಂದ ಹಲವಾರು ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿರುವ ಉದಾಹರಣೆಗಳಿವೆ. ಆದ್ದರಿಂದ ಪ್ರತಿಯೊಬ್ಬ ಮತದಾರರೂ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು.  

ಸಾಮಾನ್ಯವಾಗಿ "ನಾನು ಹಲವು ಬಾರಿ ಮತ ಚಲಾಯಿಸಿದ್ದೇನೆ, ನನ್ನ ಹೆಸರು ಪಟ್ಟಿಯಲ್ಲೇ ಇದೆ. ಮತ್ತೆ ಏಕೆ ಅರ್ಜಿ ಭರ್ತಿ ಮಾಡಬೇಕು?" ಎಂಬ ಭಾವನೆ ಹಲವರಲ್ಲಿದೆ. ಆದರೆ ಇದು ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಾಗಿರುವುದರಿಂದ, 2025ರ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರಿಗೂ ಪೂರ್ವ ಮುದ್ರಿತ ಎಸ್‌ಐಆರ್ ಎನ್ಯೂಮರೇಷನ್ ನಮೂನೆ ನೀಡಲಾಗುತ್ತಿದೆ ಎಂದು ವಿವರಿಸಿದರು.  

ನಮೂನೆಯಲ್ಲಿ ಮತದಾರರ ಹೆಸರು, ಭಾವಚಿತ್ರ, ಕ್ರಮ ಸಂಖ್ಯೆ, ಮತಗಟ್ಟೆ ಹಾಗೂ ವಿಧಾನಸಭಾ ಕ್ಷೇತ್ರದ ವಿವರಗಳು ಇರುತ್ತವೆ. ಒಂದೇ ಮನೆಯಲ್ಲಿ ನಾಲ್ವರು ಮತದಾರರಿದ್ದರೆ, ನಾಲ್ವರಿಗೂ ಪ್ರತ್ಯೇಕ ನಮೂನೆಗಳನ್ನು ನೀಡಲಾಗುತ್ತದೆ. ಹಳೆಯ ಗುರುತಿನ ಚೀಟಿಯಲ್ಲಿನ ಭಾವಚಿತ್ರ ಸ್ಪಷ್ಟವಾಗಿಲ್ಲದಿದ್ದರೆ ಅಥವಾ ಬದಲಾವಣೆ ಅಗತ್ಯವಿದ್ದರೆ, ಇತ್ತೀಚಿನ ಬಿಳಿ ಹಿನ್ನೆಲೆಯ ಪಾಸ್ಪೋರ್ಟ್‌ ಗಾತ್ರದ ಭಾವಚಿತ್ರವನ್ನು ಬಿಎಲ್‌ಒಗೆ ನೀಡುವ ಮೂಲಕ ಹೊಸ ಪಟ್ಟಿಯಲ್ಲಿ ನವೀಕರಿಸಿಕೊಳ್ಳಬಹುದು ಎಂದು ತಿಳಿಸಿದರು.  

ಎನ್ಯೂಮರೇಷನ್ ನಮೂನೆಗಳನ್ನು ಜೂನ್ 30ರಿಂದ ವಿತರಿಸಲಾಗುತ್ತಿದ್ದು, ಜುಲೈ 29ರೊಳಗೆ ಭರ್ತಿ ಮಾಡಿ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸದಿದ್ದರೆ ಮುಂದಿನ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬ ನಾಗರಿಕರೂ ಈ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಅಬಕಾರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಬಿಡ್ದಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.