ಅಧಿಕಾರಿಗಳ ಅಶಿಸ್ತು ವರ್ತನೆಗೆ ಪಾಲಿಕೆ ಪದಾಧಿಕಾರಿಗಳ ಅಸಮಾಧಾನ

ಅಧಿಕಾರಿಗಳ ಅಶಿಸ್ತು ವರ್ತನೆಗೆ ಪಾಲಿಕೆ ಪದಾಧಿಕಾರಿಗಳ ಅಸಮಾಧಾನ   Corporation office-bearers unhappy with the undisciplined behavior of officials


ಬೆಳಗಾವಿ 01:  ಮಹಾನಗರ ಪಾಲಿಕೆಯ ಚುನಾಯಿತ ಆಡಳಿತ ಮಂಡಳಿಗೆ ನಾಲ್ಕು ವರ್ಷಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ನಾಲ್ಕನೇ ವರ್ಷದ ಸ್ಥಾಯಿ ಸಮಿತಿಗಳ ಸಭೆಗಳು ನಡೆಯುತ್ತಿದ್ದರೂ, ಪಾಲಿಕೆಯ ಕೆಲ ಅಧಿಕಾರಿಗಳು ಸಭೆಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗದೇ ಹಾಗೂ ಅಗತ್ಯ ಮಾಹಿತಿಯೊಂದಿಗೆ ಸಿದ್ಧರಾಗಿ ಬಾರದಿರುವುದಕ್ಕೆ ನಗರ ಸೇವಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಸೋಮವಾರ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳ ಸಭಾಭವನದಲ್ಲಿ ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೇಯಸ ನಾಕಾಡಿ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಯಿತು.   

ಸಭೆಗೆ ಅಧಿಕಾರಿಗಳು ವಿಳಂಬವಾಗಿ ಆಗಮಿಸುವುದು ಹಾಗೂ ಸಂಪೂರ್ಣ ಮಾಹಿತಿಯಿಲ್ಲದೆ ಹಾಜರಾಗಿರುವುದು ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.  

ಅಧಿಕಾರಿಗಳ ಅಶಿಸ್ತಿನ ವರ್ತನೆಗೆ ಕಿಡಿಕಾರಿದ ಮೇಯರ್, ಉಪಮೇಯರ್, ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, “ನಾವು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗುತ್ತಿದ್ದರೂ ಅಧಿಕಾರಿಗಳಿಗೆ ಸಭೆಯ ಸಮಯ ಮತ್ತು ಜವಾಬ್ದಾರಿಗಳ ಬಗ್ಗೆ ಪದೇಪದೇ ತಿಳಿಸಿ ಹೇಳುವ ಪರಿಸ್ಥಿತಿ ಎದುರಾಗಿದೆ. ನೋಟಿಸ್ ನೀಡಿದರೂ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗುತ್ತಿಲ್ಲ. ನಿಮ್ಮ ಈ ವರ್ತನೆಯಿಂದ ಪಾಲಿಕೆಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಅಧಿಕಾರಿಗಳ ತಪ್ಪಿನಿಂದ ಜನರ ಮುಂದೆ ನಾವು ಕೆಟ್ಟವರಾಗಿ ಕಾಣುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.  

ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ನಗರ ಸೇವಕರಿಗೆ ಸಮರ​‍್ಕವಾಗಿ ನೀಡದೇ ಇರುವುದು, ಸಭೆಗೆ ಅಗತ್ಯ ಸಿದ್ಧತೆಯಿಲ್ಲದೆ ಆಗಮಿಸುವುದು ಹಾಗೂ ಸಭೆಗಳಿಗೆ ವಿಳಂಬವಾಗಿ ಬರುವುದು ಸರಿಯಲ್ಲ ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.