ರೋಗಿಗಳ ಸುರಕ್ಷತೆಗೆ ಆರೋಗ್ಯ ಸಿಬ್ಬಂದಿಯ ಸಮನ್ವಯ ಅಗತ್ಯ: ಡಾ. ಕರ್ನಲ್ ಎಂ. ದಯಾನಂದ

ರೋಗಿಗಳ ಸುರಕ್ಷತೆಗೆ ಆರೋಗ್ಯ ಸಿಬ್ಬಂದಿಯ ಸಮನ್ವಯ ಅಗತ್ಯ: ಡಾ. ಕರ್ನಲ್ ಎಂ. ದಯಾನಂದ  Coordination among healthcare staff is essential for patient safety: Dr. Col. M. Dayananda

ಬೆಳಗಾವಿ, ಸೆ. 17: ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ಅವಿಭಾಜ್ಯ ಅಂಗವಾಗಿದ್ದು, ರೋಗಿಗಳ ಸುರಕ್ಷತೆಯನ್ನು ಪರಿಗಣಿಸಿ ಅದನ್ನು ನಿರಂತರವಾಗಿ ಕಾಪಾಡುವ ಅಗತ್ಯವಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ. ದಯಾನಂದ ಹೇಳಿದರು.  ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಸೆ. 17ರಂದು ಆಯೋಜಿಸಿದ್ದ ವಿಶ್ವ ರೋಗಿ ಸುರಕ್ಷತಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸೇವೆ ಪಡೆಯುವ ರೋಗಿಗಳಿಗೆ ಚಿಕಿತ್ಸೆಯ ವೇಳೆ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟಲು ಆಸ್ಪತ್ರೆಯ ಆಡಳಿತ, ವೈದ್ಯಕೀಯ ಸಿಬ್ಬಂದಿ, ರೋಗಿಗಳು ಹಾಗೂ ಕುಟುಂಬಸ್ಥರು ಸೇರಿದಂತೆ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.  

ದೀರ್ಘಕಾಲೀನ ಕಾಯಿಲೆಗಳಿಂದ ಬಳಲುತ್ತಿರುವವರು ಪದೇಪದೇ ಆರೋಗ್ಯ ಸೇವೆ ಪಡೆಯುವುದರಿಂದ ಇಂತಹ ಅಪಾಯಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆಯಿದೆ. ಹೃದಯ ಸಂಬಂಧಿತ ಕಾಯಿಲೆಗಳು, ಕ್ಯಾನ್ಸರ್, ಮಧುಮೇಹ ಹಾಗೂ ದೀರ್ಘಕಾಲೀನ ಉಸಿರಾಟದ ಕಾಯಿಲೆಗಳು ಪ್ರಮುಖ ಅಸಾಂಕ್ರಾಮಿಕ ರೋಗಗಳಾಗಿದ್ದು, ಇವುಗಳಿಗೆ ದೀರ್ಘಕಾಲದ ಚಿಕಿತ್ಸೆ ಹಾಗೂ ನಿರಂತರ ಆರೈಕೆಯ ಅಗತ್ಯವಿದೆ ಎಂದು ಅವರು ತಿಳಿಸಿದರು.  ಕಾರ್ಯಕ್ರಮದ ಬಳಿಕ ರೋಗಿಗಳ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.  

ಕ್ಲಿನಿಕಲ್ ಸರ್ವಿಸ್ ನಿರ್ದೇಶಕರಾದ ಡಾ. ಮಾಧವ ಪ್ರಭು ಹಾಗೂ ರೋಗಿ ಸುರಕ್ಷತಾ ಅಧಿಕಾರಿ ಡಾ. ವಿ. ಎ. ಕೋಟಿವಾಲೆ ಮಾತನಾಡಿದರು. ಕ್ಲಿನಿಕಲ್ ಫಾರ್ಮಕಾಲಜಿಸ್ಟ್‌ ಡಾ. ಬಿಬಿ ಹಬೀಬಾ ಅವರು ಓಷಧಿ ಸುರಕ್ಷತೆ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಡಾ. ರಾಜಶೇಖರ ಸೋಮನಟ್ಟಿ, ಎನ್‌. ಲೋಕೇಶ್, ವಿನಯ ಬೇದ್ರೆ, ರವಿ ಸಂಕೇಶ್ವರಿ, ಜೆ. ಡಿ. ಮಲ್ಲಾಪುರ, ಪ್ರೇಮಾನಂದ ಗುಗ್ಗರಿ, ರುತುಜಾ, ಶ್ವೇತಾ, ಅಲಗೌಡಾ ಪಾಟೀಲ, ಮಹಾಂತೇಶ ದಿವಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.