ದಾವಣಗೆರೆ,
ಏ.18,ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಹಕಾರ ಸಚಿವ
ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳೊಂದಿಗೆ ಇಂದು ಭೇಟಿ ನೀಡಿ ಪರಿಶೀಲಿಸಿದರು. ಈ
ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ರೇಣುಕಾಚಾರ್ಯ, ದಾವಣಗೆರೆ ಡಿಸಿಸಿ
ಬ್ಯಾಂಕ್ ಅಧ್ಯಕ್ಷರಾದ ಷಣ್ಮುಗಪ್ಪ ಇದ್ದರು.ಇದೇ ವೇಳೆ ರೈತರು ಹಾಗೂ ವರ್ತಕರ
ಸಮಸ್ಯೆಗಳನ್ನು ಆಲಿಸಿದ ಸಚಿವರು, ಸರ್ಕಾರ ಹಾಗೂ ಮುಖ್ಯಮಂತ್ರಿಗಳು ನಿಮ್ಮ ಪರ
ಇರುವುದಾಗಿ ಅವರಿಗೆ ತಿಳಿಸಿದರು.
ಮಾರುಕಟ್ಟೆಗೆ ಬೆಳೆ ಸಾಗಾಟದ ವೇಳೆ ಯಾವುದೇ
ಸಮಸ್ಯೆಯಾಗಿದೆಯೇ ಎಂದು ಸಚಿವರು ಖುದ್ದು ರೈತರೊಬ್ಬರ ಬಳಿ ಮಾಹಿತಿ ಪಡೆದರು. ಬಳಿಕ
ಲಾರಿ ಮಾಲೀಕರನ್ನು ಮಾತನಾಡಿಸಿ, ಚೆಕ್ ಪೋಸ್ಟ್ ಬಳಿ ಹಣ ವಸೂಲಿಗಳಂತಹ ಪ್ರಕರಣಗಳು,
ಸಾಗಾಟಕ್ಕೆ ತೊಂದರೆ ನೀಡುವಂತಹ ಸನ್ನಿವೇಶಗಳು ಎದುರಾಗಿವೆಯೇ ಎಂದು ಪ್ರಶ್ನಿಸಿ,
ಇದ್ದರೆ ಗಮನಕ್ಕೆ ತರುವಂತೆ ತಿಳಿಸಿದರಲ್ಲದೆ, ಇಂಥ ಪ್ರಕರಣಗಳನ್ನು ಸರ್ಕಾರ ಹಾಗೂ
ಮುಖ್ಯಮಂತ್ರಿಗಳು ಸಹಿಸುವುದಿಲ್ಲ ಎಂದು ತಿಳಿಸಿದರು.
ಅಧಿಕಾರಿಗಳ ಜೊತೆ ಸಭೆ
ಎಪಿಎಂಸಿಯಲ್ಲಿ ಸಭೆ ನಡೆಸಿದ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ರೈತರು ಹಾಗೂ
ವರ್ತಕರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ರೈತರು ಬೆಳೆದ ತರಕಾರಿ, ಹಣ್ಣು, ದಿನಸಿ
ಪದಾರ್ಥಗಳ ಸರಬರಾಜಿಗೆ ಸಮಸ್ಯೆಯಾಗುತ್ತಿದೆಯೇ ಎಂದು ತಿಳಿದುಕೊಳ್ಳಲು ಪ್ರತಿ ಜಿಲ್ಲೆಯ
ಒಂದು, ಇಲ್ಲವೇ 2 ಎಪಿಎಂಸಿಗಳಿಗೆ ಭೇಟಿ ನೀಡುತ್ತಿದ್ದೇನೆ. ಈಗ ಎಲ್ಲೂ ಸಹ ಪೊಲೀಸರಿಂದ
ತರಕಾರಿ ಸೇರಿ ಅಗತ್ಯ ವಸ್ತುಗಳ ಸಾಗಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಒಂದು ವೇಳೆ ಇಂಥ ಸಮಸ್ಯೆಗಳು ಕಂಡುಬಂದರೆ ತಿಳಿಸಿ, ನಾನು ಇಲ್ಲಿಂದ
ನಿರ್ಗಮಿಸುವುದರೊಳಗೆ ಬಗೆಹರಿಸುತ್ತೇನೆ ಎಂದು ಸಚಿವರು ತಿಳಿಸಿದರು.
ನಾನು
ಡಿಸಿಸಿ ಬ್ಯಾಂಕ್ ಗಳಿಗೆ ಭೇಟಿ ನೀಡಿ ರೈತರಿಗೆ ಆಗುತ್ತಿರುವ ಸಾಲದ ಸಮಸ್ಯೆಗಳ ಬಗ್ಗೆ
ಪರಿಶೀಲಿಸುತ್ತಿದ್ದೇನೆ. ಇನ್ನು ಎರಡು ಮೂರು ದಿನದಲ್ಲಿ ರೈತರಿಗೆ ಸಾಲ ವಿತರಿಸುವ
ಸಂಬಂಧ ಸರ್ಕಾರದಿಂದ ಆದೇಶ ಹೊರಡಿಸಲಾಗುವುದು. ಮಳೆಗಾಲ ಶುರುವಾದ ಮೇಲೆ ಯಾವುದೇ
ಕಾರಣಕ್ಕೂ ನನಗೆ ಸಾಲ ಸಿಗುತ್ತಿಲ್ಲ ಎಂಬ ದೂರುಗಳು ಬರಕೂಡದು ಎಂಬ ನಿಟ್ಟಿನಲ್ಲಿ
ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.ಇಲ್ಲಿ ರೈತರು ಬೆಳೆದ
ಬೆಳೆಗಳ ಮಾರಾಟಕ್ಕೆ ಸಬಂಧಪಟ್ಟಂತಹ ಸಮಸ್ಯೆಗಳ ಬಗ್ಗೆ ವಿಚಾರಿಸುತ್ತಿದ್ದೇನೆ.
ಎಲ್ಲೆಲ್ಲಿ ಹೂವು ಬೆಳೆದು ಮಾರುಕಟ್ಟೆ ಸಿಗದೆ ನಷ್ಟ ಹೊಂದುತ್ತಿದ್ದಾರೋ ಅಂಥವರ ಬಗ್ಗೆ
ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಇನ್ನು ಡೊಳ್ಳು ಮೆಣಸು ಸೇರಿ ಕೆಲವು
ಬೆಳೆಗಳ ಸಮಸ್ಯೆಗಳು ಕೇಳಿಬಂದಿದ್ದು, ಶೀಘ್ರ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ
ಬಗೆಹರಿಸುತ್ತೇನೆ ಎಂದರು.
ಎಪಿಎಂಸಿಗಳಲ್ಲಿ ರೈತರಿಗೆ ಪ್ರತಿದಿನ ಊಟದ
ವ್ಯವಸ್ಥೆ, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳ ವಿತರಣೆ ಕಡ್ಡಾಯವಾಗಿ ಆಗಬೇಕು.
ಸಮರ್ಪಕವಾಗಿ ಇದರ ನಿರ್ವಹಣೆಯನ್ನು ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು
ಸೂಚಿಸಿದರು.ಕೋಲ್ಡ್ ಸ್ಟೊರೇಜ್ ಬೇಕೆಂದು ರೈತರು ಗಮನಕ್ಕೆ ತಂದಾಗ, ಪ್ರಸ್ತಾವನೆ ಸಲ್ಲಿಸಿದರೆ ಸೋಮವಾರವೇ ಅನುಮತಿ ನೀಡುವುದಾಗಿ ಸಚಿವರು ತಿಳಿಸಿದರು. ಬಜಾಜ್
ಫೈನಾನ್ಸ್ ಸೇರಿ ಕೆಲವು ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಲೇವಾದೇವಿಗಾರರು
ನಾಗರಿಕರಿಂದ ಸಾಲ ವಸೂಲಾತಿಗೆ ಆಗ್ರಹ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ.
ಹೀಗಾಗಿ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಇನ್ನು 2-3 ದಿನಗಳಲ್ಲಿ
ರಾಜ್ಯ ಹಣಕಾಸು ಇಲಾಖೆಯಿಂದ ಆದೇಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ರೈತರ ವಾಹನ,
ಆಸ್ತಿ ಜಪ್ತಿಯಂತಹ ಕ್ರಮಗಳನ್ನು 3 ತಿಂಗಳ ಅವಧಿವರೆಗೆ ಕೈಗೊಳ್ಳದಂತೆ ಸೂಚಿಸಲಾಗುವುದು
ಎಂದು ಸಚಿವರು ತಿಳಿಸಿದರು. ಸಂಸದರಾದ ಜಿ.ಎಂ.ಸಿದ್ದೇಶ್ವರ, ಶಾಸಕರಾದ
ರೇಣುಕಾಚಾರ್ಯ, ದಾವಣಗೆರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಷಣ್ಮುಗಪ್ಪ, ಜಿಲ್ಲಾಧಿಕಾರಿ
ಮಹಾಂತೇಶ್ ಬಿಳಗಿ ಉಪಸ್ಥಿತರಿದ್ದರು.
ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕ್ರಮಮೈಸೂರಲ್ಲಿ
ಕೊರೋನಾ ವೈರಸ್ ಗೆ ಸಂಬಂಧಪಟ್ಟಂತೆ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ. ಇಂದು 3 ಹೊಸ
ಪ್ರಕರಣಗಳು ಪತ್ತೆಯಾಗಿವೆ. ಇನ್ನು ನಂಜನಗೂಡು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
ಅಲ್ಲಿ ಎಲ್ಲರನ್ನೂ ಹೋಂ ಕ್ವಾರೆಂಟೇನ್ ನಲ್ಲಿ ಇಡಲಾಗಿದೆ. ಜ್ಯೂಬ್ಲಿಯೆಂಟ್ ಕಾರ್ಖಾನೆ
ನೌಕರರ ಮೇಲೆ ಸಂಪೂರ್ಣ ನಿಗಾ ವಹಿಸಲಾಗಿದೆ. ಹೀಗಾಗಿ ಮೈಸೂರಿನಲ್ಲಿ ರೋಗ ಸಂಪೂರ್ಣವಾಗಿ
ಹತೋಟಿಗೆ ಬರುವವರೆಗೆ ಕಾರ್ಖಾನೆಯನ್ನು ಪ್ರಾರಂಭಿಸುವುದಿಲ್ಲ ಎಂದು ತಿಳಿಸಿದರು.