ಪೌರಕಾರ್ಮಿಕರು ಸಮಾಜದ ನಿಜವಾದ ಜೀವನಾಡಿಗಳು: ಚಂದ್ರಶೇಖರ್ ಹಾದಿಮನಿ

ಪೌರಕಾರ್ಮಿಕರು ಸಮಾಜದ ನಿಜವಾದ ಜೀವನಾಡಿಗಳು: ಚಂದ್ರಶೇಖರ್ ಹಾದಿಮನಿ  Civil servants are the real lifeblood of society: Chandrashekhar Hadimani

ವರದಿ: ಕೃಷ್ಣಾ ಎಚ್ ಹಡಪದ

ಗದಗ, ಮೇ 1: ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರು ಸಮಾಜದ ನಿಜವಾದ ಜೀವನಾಡಿಗಳು. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ," ಎಂದು ಗದಗ-ಬೆಟಗೇರಿ ನಗರಸಭೆಯ ಮೇಲ್ವಿಚಾರಕರಾದ ಚಂದ್ರಶೇಖರ್ ಹಾದಿಮನಿ ಅವರು ಪ್ರತಿಪಾದಿಸಿದರು.     

ನಗರದ ಶ್ರೀ ಗುರು ಸಚ್ಚಿದಾನಂದ ಮಠದಲ್ಲಿ ಇಂದು ’ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆ’ ಹಮ್ಮಿಕೊಂಡಿದ್ದ ’ವಿಶ್ವ ಕಾರ್ಮಿಕ ದಿನಾಚರಣೆ’ ಹಾಗೂ ಪೌರಕಾರ್ಮಿಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದ ತಳಮಟ್ಟದಲ್ಲಿ ದುಡಿಯುವ ಶ್ರಮಿಕರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ, ಪೌರಕಾರ್ಮಿಕರಾದ ಶಿವು ಜಂಬಲದಿನ್ನಿ, ವಿಜಯ ಅಳಹುಂಡಿ, ಮಂಜುನಾಥ ಬಂಕದಮನಿ ಹಾಗೂ ಪರಶುರಾಮ ಯಲ್ಲಾಪುರ ಅವರನ್ನು ’ದಾರೀದೀಪ ಮಹಿಳಾ ವಿವಿಧೋದ್ದೇಶಗಳ  ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಸಸಿಗಳನ್ನು ನೀಡಿ  "ಪರಿಸರ ರಕ್ಷಣೆ ಮತ್ತು ಸ್ವಚ್ಛತೆ"ಯ ಸಂದೇಶದೊಂದಿಗೆ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.       

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕ್ರಾಂತಿಸೇನಾ ಸಂಘಟನೆಯ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಮಾತನಾಡಿ, "ಕಾರ್ಮಿಕರ ಬೆವರಿನ ಹನಿಗೆ ಬೆಲೆ ಕಟ್ಟಲಾಗದು. ಸರ್ಕಾರ ಮತ್ತು ಸಮಾಜ ಪೌರಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸದಾ ಬದ್ಧವಾಗಿರಬೇಕು," ಎಂದು ಕರೆ ನೀಡಿದರು.  ’ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶಕುಂತಲಾ ಮುಳುಗುಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ಪೀಳಿಗೆಗೆ ಶ್ರಮದ ಮಹತ್ವ ತಿಳಿಸಿಕೊಡುವ ಉದ್ದೇಶದಿಂದ ಈ ಕಾರ್ಯಕ್ರಮದಲ್ಲಿ ಬೇಸಿಗೆ ಶಿಬಿರದ ಮಕ್ಕಳನ್ನು ಪಾಲ್ಗೊಳ್ಳುವಂತೆ ಮಾಡಲಾಗಿದೆ. ಪೌರಕಾರ್ಮಿಕರ ಬದುಕಿಗೆ ದಾರೀದೀಪವಾಗುವುದು ನಮ್ಮ ಸಂಸ್ಥೆಯ ಮುಖ್ಯ ಆಶಯ, ಎಂದರು.       

ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಜ್ಯೋತಿ ದೇಸಾಯಿಗೌಡರ್, ವಿಜಯಲಕ್ಷ್ಮಿ ಸೂಟಿ, ದೀಪ ಉಗಲಾಟ್, ಕೋಮಲ್ ಬೇವಿನಕಟ್ಟಿ, ಜ್ಯೋತಿ ಕೋಡೆ ಹಾಗೂ ರೂಪ ಬೇವಿನಕಟ್ಟಿ ಉಪಸ್ಥಿತರಿದ್ದು, ಕಾರ್ಮಿಕರ ಪರವಾಗಿ ಮಾತನಾಡಿದರು.         

ನಾಗರಾಜ್ ಗೌಡಿ, ಮಂಜುನಾಥ ಬೆಳದಡಿ, ರಾಜಶೇಖರ್ ಮುಳಗುಂದ ಸೇರಿದಂತೆ ಬೇಸಿಗೆ ಶಿಬಿರದ ನೂರಾರು ಮಕ್ಕಳು ಹಾಗೂ ಪಾಲಕರು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.  

"ನೈರ್ಮಲ್ಯ ಕಾಯಕದಲ್ಲಿ ತೊಡಗಿರುವ ಪೌರಕಾರ್ಮಿಕರ ಬದುಕಿಗೆ ದಾರೀದೀಪವಾಗುವುದು ನಮ್ಮ ಸಂಸ್ಥೆಯ ಮುಖ್ಯ ಆಶಯ. ಸಮಾಜದ ತಳಮಟ್ಟದಲ್ಲಿ ದುಡಿಯುವ ಈ ಶ್ರಮಜೀವಿಗಳಿಗೆ ಪ್ರೀತಿ ಮತ್ತು ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ. ಇಂದಿನ ಮಕ್ಕಳಲ್ಲಿ ಈ ಕಾಯಕ ಸಂಸ್ಕೃತಿಯನ್ನು ಬೆಳೆಸಿದರೆ ಮಾತ್ರ ಮುಂದಿನ ದಿನಗಳಲ್ಲಿ ಆರೋಗ್ಯವಂತ ಮತ್ತು ಗೌರವಯುತ ಸಮಾಜ ಕಟ್ಟಲು ಸಾಧ್ಯ.  

 ಶಕುಂತಲಾ ಮುಳುಗುಂದ,  

ಅಧ್ಯಕ್ಷರು, ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆ, ಗದಗ.