ಪೌರ ಕಾರ್ಮಿಕರು ಸಮಾಜದ ನಿಜವಾದ ಕರ್ಮಯೋಗಿಗಳು: ಮಹೇಶ ಮಣ್ಣಯ್ಯನ್ನವರಮಠ

ಪೌರ ಕಾರ್ಮಿಕರು ಸಮಾಜದ ನಿಜವಾದ ಕರ್ಮಯೋಗಿಗಳು: ಮಹೇಶ ಮಣ್ಣಯ್ಯನ್ನವರಮಠ Civic workers are the true 'Karma Yogis' of society: Mahesh Mannayyanavaramatha

ಮಹಾಲಿಂಗಪುರ 23: ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಹಗಲಿರುಳು ಶ್ರಮಿಸುವ ಪೌರ ಕಾರ್ಮಿಕರ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ 23ನೇ ರಾಜ್ಯ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಸ್ಥಳೀಯ ಪುರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಅದ್ದೂರಿ ಸನ್ಮಾನ ಕಾರ್ಯಕ್ರಮ ಬುಧವಾರ ಪುರಸಭೆಯ ಸಭಾಭವನದಲ್ಲಿ ನಡೆಯಿತು. 

ಬೆಳಗಿನ ಜಾವ ನಗರವಾಸಿಗಳು ಎಚ್ಚರಗೊಳ್ಳುವ ಮುನ್ನವೇ ಕೈಯಲ್ಲಿ ಪೊರಕೆ ಹಿಡಿದು ನಗರದ ಬೀದಿಗಿಳಿಯುವ ಪೌರ ಕಾರ್ಮಿಕರು, ಸ್ವಚ್ಛತೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ಪರಿಶ್ರಮದಿಂದಲೇ ಸ್ವಚ್ಛ ಹಾಗೂ ಆರೋಗ್ಯಕರ ನಗರ ನಿರ್ಮಾಣ ಸಾಧ್ಯವಾಗುತ್ತಿದೆ. ಇಂತಹ ಶ್ರಮಜೀವಿಗಳನ್ನು ಗೌರವಿಸುವುದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ನಿರಂತರವಾಗಿ ನಡೆಯಬೇಕು ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ಮಣ್ಣಯ್ಯನ್ನವರಮಠ, ಪೌರ ಕಾರ್ಮಿಕರು ಸಮಾಜದ ನಿಜವಾದ ಕರ್ಮಯೋಗಿಗಳು. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ನಗರದ ಸ್ವಚ್ಛತೆಗಾಗಿ ದುಡಿಯುವ ಅವರ ಸೇವೆ ಅತ್ಯಂತ ಶ್ರೇಷ್ಠವಾದದ್ದು.

ನಾವು ಸ್ವಚ್ಛ ರಸ್ತೆಯಲ್ಲಿ ನಡೆಯುತ್ತೇವೆ, ಸ್ವಚ್ಛ ಪರಿಸರದಲ್ಲಿ ಉಸಿರಾಡುತ್ತೇವೆ ಎಂದರೆ ಅದರ ಹಿಂದೆ ಪೌರ ಕಾರ್ಮಿಕರ ಬೆವರು ಮತ್ತು ಪರಿಶ್ರಮವಿದೆ. ಆದ್ದರಿಂದ ಅವರನ್ನು ಕೇವಲ ಕಾರ್ಮಿಕರೆಂದು ನೋಡದೆ, ನಗರದ ಸ್ವಚ್ಛತೆಯ ಕಾವಲುಗಾರರೆಂದು ಗೌರವಿಸಬೇಕು ಎಂದರು. 

ಪೌರ ಕಾರ್ಮಿಕರ ಪರಿಶ್ರಮಕ್ಕೆ ಸಮಾಜದಿಂದ ಗೌರವ, ಪ್ರೀತಿ ಹಾಗೂ ಆತ್ಮೀಯತೆ ದೊರೆಯಬೇಕು. ಅವರ ಕುಟುಂಬಗಳ ಬಗ್ಗೆಯೂ ಕಾಳಜಿ ವಹಿಸುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕು. ಪೌರ ಕಾರ್ಮಿಕರನ್ನು ನಿರಂತರವಾಗಿ ಗೌರವಿಸಿ ಸತ್ಕರಿಸುವ ಕಾರ್ಯ ನಡೆಯಬೇಕು ಎಂದು ಅವರು ಆಶಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಮಾತನಾಡಿ, ನಗರದ ಸ್ವಚ್ಛತೆ ಎಂಬುದು ಕೇವಲ ಪುರಸಭೆಯ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.

ಆದರೆ ಈ ಜವಾಬ್ದಾರಿಯನ್ನು ಪ್ರತಿದಿನ ತಮ್ಮ ಕರ್ತವ್ಯದ ಮೂಲಕ ನಿಭಾಯಿಸುತ್ತಿರುವವರು ನಮ್ಮ ಪೌರ ಕಾರ್ಮಿಕರು. ಮಳೆ, ಬಿಸಿಲು, ಚಳಿ ಯಾವುದನ್ನೂ ಲೆಕ್ಕಿಸದೆ ನಗರದ ಸ್ವಚ್ಛತೆಗಾಗಿ ಅವರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದರು. 

ಪೌರ ಕಾರ್ಮಿಕರ ಪರಿಶ್ರಮಕ್ಕೆ ತಕ್ಕ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ. ನಗರದ ಸ್ವಚ್ಛತೆಯ ಹಿಂದೆ ಅವರ ಬೆವರಿನ ಶ್ರಮವಿದೆ. ಹೀಗಾಗಿ ಪೌರ ಕಾರ್ಮಿಕರನ್ನು ಗೌರವಿಸುವುದು ಎಂದರೆ ಅವರ ಸೇವೆಯನ್ನಷ್ಟೇ ಅಲ್ಲ, ಸ್ವಚ್ಛತೆಯ ಮಹತ್ವವನ್ನೂ ಗೌರವಿಸಿದಂತಾಗುತ್ತದೆ.

ಪುರಸಭೆಯ ವತಿಯಿಂದ ಪೌರ ಕಾರ್ಮಿಕರೊಂದಿಗೆ ಸದಾ ಆತ್ಮೀಯವಾಗಿ ನಡೆದುಕೊಂಡು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಶಂಕರಗೌಡ ಪಾಟೀಲ ಹೇಳಿದರು.