ಯುಪಿಐ ಪಾವತಿಗೆ ಶುಲ್ಕ ವಿಧಿಸುವ ಕೇಂದ್ರದ ಕ್ರಮ ಖಂಡನೀಯ: ಇಮ್ತಿಯಾಜ್ ಮಾನ್ವಿ

ಯುಪಿಐ ಪಾವತಿಗೆ ಶುಲ್ಕ ವಿಧಿಸುವ ಕೇಂದ್ರದ ಕ್ರಮ ಖಂಡನೀಯ: ಇಮ್ತಿಯಾಜ್ ಮಾನ್ವಿ  Centre's move to levy charges on UPI payments is condemnable: Imtiyaz Manvi

ಲೋಕದರ್ಶನ ವರದಿ 

ಗದಗ, ಸೆ.16: ದೇಶದಲ್ಲಿ ಡಿಜಿಟಲ್ ಹಾಗೂ ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುತ್ತಿರುವ ಕೇಂದ್ರ ಸರ್ಕಾರ ಇದೀಗ ಯುಪಿಐ ಡಿಜಿಟಲ್ ಪಾವತಿಗಳಿಗೆ ಶುಲ್ಕ ವಿಧಿಸಲು ಮುಂದಾಗಿರುವುದು ಜನವಿರೋಧಿ ಕ್ರಮವಾಗಿದೆ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್‌. ಮಾನ್ವಿ ಖಂಡಿಸಿದ್ದಾರೆ.  

2015ರ ಜುಲೈ 1ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಡಿಜಿಟಲ್ ಇಂಡಿಯಾ’ ಯೋಜನೆಗೆ ಚಾಲನೆ ನೀಡಿದ್ದು, ದೇಶವನ್ನು ಡಿಜಿಟಲ್ ಸಶಕ್ತ ಸಮಾಜ ಹಾಗೂ ಜ್ಞಾನಾಧಾರಿತ ಆರ್ಥಿಕತೆಯನ್ನಾಗಿ ರೂಪಿಸುವ ಉದ್ದೇಶ ಹೊಂದಿತ್ತು. ಯುಪಿಐ ವ್ಯವಸ್ಥೆ ಮೂಲಕ ಬ್ಯಾಂಕ್ನಿಂದ ಬ್ಯಾಂಕ್ಗೆ ತ್ವರಿತವಾಗಿ ಹಣ ವರ್ಗಾವಣೆ ಸಾಧ್ಯವಾಗಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದೆ ಎಂದು ಅವರು ಹೇಳಿದರು.  

ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟಅಪ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳ ಮೂಲಕ ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುತ್ತಿರುವ ಕೇಂದ್ರ ಸರ್ಕಾರವೇ ಇದೀಗ ಯುಪಿಐ ಪಾವತಿಗೆ ಶುಲ್ಕ ವಿಧಿಸಲು ಮುಂದಾಗಿರುವುದು ಏಕೆ ಎಂದು ಪ್ರಶ್ನಿಸಿದರು.  

ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀರುವ ಸಾಧ್ಯತೆ ಇರುವ ಈ ಕ್ರಮವನ್ನು ಕೇಂದ್ರ ಸರ್ಕಾರ ಕೂಡಲೇ ಕೈಬಿಡಬೇಕು. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಮೂಲಕ ಜನರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಇಮ್ತಿಯಾಜ್ ಆರ್‌. ಮಾನ್ವಿ ಆಗ್ರಹಿಸಿದರು.