ಶಿಗ್ಗಾವಿಯಲ್ಲಿ ಶ್ರೀ ಹಡಪದ ಅಪ್ಪಣ್ಣ 892ನೇ ಜಯಂತಿ ಆಚರಣೆ
Celebration of Sri Hadapada Appanna's 892nd Jayanti in Shiggaon
ಲೋಕದರ್ಶನ ವರದಿ
ಶಿಗ್ಗಾವಿ, ಜು.29: ಹಡಪದ ಅಪ್ಪಣ್ಣ ಅವರ ವಚನಗಳಲ್ಲಿ ಲಾಲಿತ್ಯ, ಗುರು-ಲಿಂಗ-ಜಂಗಮ ನಿಷ್ಠೆಯ ಸಾರ ಅಡಕವಾಗಿದೆ. ಅವರ ವಚನಗಳ ಪುಸ್ತಕಗಳನ್ನು ಮನೆಗಳಲ್ಲಿ ಇಟ್ಟು ಪ್ರತಿದಿನ ಮಕ್ಕಳು ಹಾಗೂ ಕುಟುಂಬದ ಎಲ್ಲ ಸದಸ್ಯರಿಗೆ ಓದಿಸುವ ಮೂಲಕ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮಾಯಗೇರಿ ಹೇಳಿದರು. ತಾಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀ ಹಡಪದ ಅಪ್ಪಣ್ಣ ಅವರ 892ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪವು ಎಲ್ಲ ಧರ್ಮ ಮತ್ತು ಸಮುದಾಯದ ಶರಣರಿಗೆ ಸಮಾನ ಅವಕಾಶ ಕಲ್ಪಿಸಿತ್ತು. ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮೇಧಾರ ಕೇತಯ್ಯ, ಸಮಗಾರ ಹರಳಯ್ಯ, ಸೊನ್ನಲಿಗ ಸಿದ್ದರಾಮ ಸೇರಿದಂತೆ ಅನೇಕ ಶರಣರು ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಅಂದು ಸಮಾಜದಲ್ಲಿ ಇದ್ದ ಅಸ್ಪೃಶ್ಯತೆ ಮತ್ತು ಜಾತಿ ಭೇದವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಬಸವಣ್ಣನವರು ಹಡಪದ ಅಪ್ಪಣ್ಣ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿ ಸಮಾನತೆಯ ಸಂದೇಶ ಸಾರಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಹಡಪದ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಸಮುದಾಯದ ಹಕ್ಕುಗಳಿಗೆ ಅಗತ್ಯವಿರುವ ಕಾನೂನು ತೊಡಕುಗಳನ್ನು ನಿವಾರಿಸಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಶ್ರೀ ಹಡಪದ ಅಪ್ಪಣ್ಣ ಕ್ರೆಡಿಟ್ ಕೋ-ಆಪ್ ಸೊಸೈಟಿಯ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಹಡಪದ ಅಪ್ಪಣ್ಣ ಅವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಪ್ರಮುಖ ಶರಣರಾಗಿದ್ದರು. ಬಸವಣ್ಣನವರ ಪ್ರಮುಖ ಸಹಚರರಾಗಿ ಕಾರ್ಯನಿರ್ವಹಿಸಿ ಸಮಾಜದಲ್ಲಿ ಸಮಾನತೆ ಮತ್ತು ಸೇವೆಯ ಮೌಲ್ಯಗಳನ್ನು ಪ್ರತಿಪಾದಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಯಲ್ಲಪ್ಪ ಗೊಣ್ಣೆಣ್ಣವರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಹಡಪದ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಕೌಶರದ, ಗೌರವಾಧ್ಯಕ್ಷ ಗುರುಬಸಪ್ಪ ಹಡಪದ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 