ಸಚಿವ ಸಂಪುಟ ಸಭೆ ಪೂರ್ವಸಿದ್ಧತೆ ಕುರಿತು ಸಭೆ

Cabinet meeting preparation meeting

ವಿಜಯಪುರ 8: ವಿಜಯಪುರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಪೂರ್ವಸಿದ್ಧತೆಗಳ ಕುರಿತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಬುಧವಾರ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.  

ಸಭೆಯಲ್ಲಿ ವಿಜಯಪುರ ಭಾಗದ ಅತೀ ಅವಶ್ಯಕ ಯೋಜನೆಗಳ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಅವರವರ ಕ್ಷೇತ್ರಕ್ಕೆ ಅಗತ್ಯವಿರುವ ಯೋಜನೆಗಳ ಮಾಹಿತಿಯನ್ನು ಕೂಡಲೇ ಪಡೆದುಕೊಂಡು ಆಯಾ ಇಲಾಖೆಯ ಅನುಮೋದನೆಯನ್ನು ಪಡೆದುಕೊಳ್ಳುವುದು ತಕ್ಷಣದ ಆದ್ಯತೆಯಾಗಿದೆ. ಇದರಿಂದ ನಗರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ಅಗತ್ಯವಿರುವ ಯೋಜನೆಗಳನ್ನು ಅನುಮೋದಿಸಲು ಅನುಕೂಲವಾಗುತ್ತದೆ ಎಂದು ಸಚಿವರು ಸೂಚಿಸಿದ್ದಾರೆ.    

ಜಿಲ್ಲೆಯ ಪ್ರಮುಖ ಬೇಡಿಕೆಗಳ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ, ಇಲಾಖಾವಾರು ಮತ್ತು ಸರ್ಕಾರದಿಂದ ಅನುಮೋದನೆಗೊಂಡ ಯೋಜನೆಗಳ ವಿವಿರವಾದ ಪಟ್ಟಿಯನ್ನು ಸಿದ್ಧಪಡಿಸಿ, ಸರ್ಕಾರದ ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಿ, ಚರ್ಚಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಎಂ.ಬಿ.ಪಾಟೀಲ ಹೇಳಿದರು.   

ಉತ್ತರ ಕರ್ನಾಟಕದ ಬೆಳಗಾವಿಯ ಸುವರ್ಣಸೌಧದಲ್ಲಿ ಸಂಪುಟಸಭೆಗಳು ನಡೆಯುತ್ತವೆ. ಅಲ್ಲದೇ, ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ, ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ಹಲವಾರು ಕ್ರಮಗಳನ್ನು ಜರುಗಿಸಲಾಗಿದೆ. ಈ ಹಿಂದೆ ಮಲೆಮಹಾದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಅದೇ ರೀತಿ ವಿಜಯಪುರದಲ್ಲಿ ಸಚಿವ ಸಂಪುಟ ನಡೆಸಿದರೆ, ಈಡಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲು ಮತ್ತು ಇಲ್ಲಿನ ಯೋಜನೆಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಅನುಕೂಲವಾಗಲಿದೆ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂಧಿಸಿ ಸಚಿವ ಸಂಪುಟ ಸಭೆಯನ್ನು ವಿಜಯಪುರದಲ್ಲಿ ನಡೆಸಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಸಂಪುಟ ಸಭೆ ನಡೆಯುವ ಸ್ಥಳವನ್ನು ಗುರುತಿಸಬೇಕು. ಸಭೆಗೆ ಆಗಮಿಸುವ ಸಚಿವರು ಮತ್ತು ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳಿಗೆ ವಸತಿ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ ಎಂದು ತಿಳಿಸಿದರು.   

ಈ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕೈಗಾರಿಕೆ ಸಚಿವ ಸಾರ್ವಜನಿಕರ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಭಾಗವಹಿಸಿದ್ದರು.