ಭಗತ್ ಸಿಂಗ್ ಚಿಂತನೆಗಳು ಯುವಜನರಿಗೆ ಸ್ಫೂರ್ತಿ: ಎಐಡಿಎಸ್‌ಒ

ಭಗತ್ ಸಿಂಗ್ ಚಿಂತನೆಗಳು ಯುವಜನರಿಗೆ ಸ್ಫೂರ್ತಿ: ಎಐಡಿಎಸ್‌ಒ  Bhagat Singh's ideas are an inspiration to the youth: AIDSO

ಲೋಕದರ್ಶನ ವರದಿ 

  ಧಾರವಾಡ 28: ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ 119ನೇ ಜನ್ಮದಿನದ ಅಂಗವಾಗಿ ಎಐಡಿಎಸ್‌ಒ ಧಾರವಾಡ ಜಿಲ್ಲಾ ಸಮಿತಿಯಿಂದ ನಗರದ ವಿವಿಧ ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿಗಳ ನಡುವೆ ಭಗತ್ ಸಿಂಗ್ ಅವರ ವಿಚಾರಗಳ ಪ್ರಚಾರ ಮತ್ತು ಜನ್ಮದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ, “ಭಗತ್ ಸಿಂಗ್ ಮಾನವ ಜೀವನವನ್ನು ಪ್ರೀತಿಸಿದವರು ಹಾಗೂ ಮಾನವ ಘನತೆಯನ್ನು ಎತ್ತಿಹಿಡಿದವರು. ಆದರೆ ಇಂದು ಸಮಾಜದಲ್ಲಿ ಮಾನವ ಘನತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಉಂಟಾಗುತ್ತಿದೆ. ಹಸಿವು, ಬಡತನ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ಸಮಸ್ಯೆಗಳು ತೀವ್ರವಾಗಿವೆ” ಎಂದರು.  

ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳು ಮತ್ತು ಯುವಜನರು ಜಾತಿ, ಧರ್ಮದ ಗಡಿಗಳನ್ನು ಮೀರಿ ಸಂಘಟಿತರಾಗಿ ಹೋರಾಡಬೇಕು. ಭಗತ್ ಸಿಂಗ್ ಅವರ ವಿಚಾರಗಳಿಂದ ಸ್ಫೂರ್ತಿ ಪಡೆದು ಶಿಕ್ಷಣ, ಮಾನವೀಯತೆ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಜೊತೆಗೆ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದರು.  ಇತ್ತೀಚೆಗೆ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ ದೇಶದಾದ್ಯಂತ ವಿದ್ಯಾರ್ಥಿ-ಯುವಜನರು ನಡೆಸಿದ ಪ್ರತಿಭಟನೆಗಳನ್ನು ಅವರು ಉಲ್ಲೇಖಿಸಿದರು. ಶಿಕ್ಷಣದ ವ್ಯಾಪಾರೀಕರಣ, ನಿರುದ್ಯೋಗ, ಹಸಿವು, ಬಡತನ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ವಿದ್ಯಾರ್ಥಿಗಳು ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಸಿಂಧು ಕೌದಿ, ಜಿಲ್ಲಾ ಸಂಘಟನಾಕಾರರಾದ ಸಿದ್ದು ಚಿಪ್ಪಲಕಟ್ಟಿ, ಶಾಂತೇಶ್ ನಂದಿಕೊಲ್ಮಠ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.