ಬಸವಣ್ಣನವರ ತತ್ವಗಳು ಪ್ರಜಾಪ್ರಭುತ್ವದ ಮೂಲಾಧಾರಗಳಾಗಿವೆ: ಶಂಕರ ಬಿದರಿ ಅಭಿಮತ

ಬಸವಣ್ಣನವರ ತತ್ವಗಳು ಪ್ರಜಾಪ್ರಭುತ್ವದ ಮೂಲಾಧಾರಗಳಾಗಿವೆ: ಶಂಕರ ಬಿದರಿ ಅಭಿಮತ Basavanna's principles are the foundations of democracy: Shankara Bidari's view

ಲೋಕದರ್ಶನ ವರದಿ 

ವಿಜಯಪುರ, ಏಪ್ರಿಲ್ 30: “ಬಸವೇಶ್ವರರು ಪ್ರಪಂಚದ ಸಂಸ್ಕೃತಿ ನಾಯಕರಾಗಿದ್ದು, ಅವರು ಬೋಧಿಸಿದ ತತ್ವಗಳು ಭಾರತೀಯ ಸಂವಿಧಾನದ ಉನ್ನತ ಮೌಲ್ಯಗಳಾಗಿ ರೂಪುಗೊಂಡಿವೆ. ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆ ಎಂಬ ಮೂಲಭೂತ ತತ್ವಗಳನ್ನು ಅವರು 12ನೇ ಶತಮಾನದಲ್ಲಿಯೇ ಪ್ರತಿಪಾದಿಸಿದ್ದು, ಇವು ಇಂದಿನ ಪ್ರಜಾಪ್ರಭುತ್ವದ ಮೂಲಾಧಾರಗಳಾಗಿವೆ” ಎಂದು ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕರೂ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷರಾದ ಶಂಕರ ಎಂ. ಬಿದರಿ ಹೇಳಿದರು. 

ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಭವನದಲ್ಲಿ ಬಸವೇಶ್ವರ ಅಧ್ಯಯನ ಪೀಠದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ “ವಿಶ್ವಗುರು ಮತ್ತು ಸಂಸ್ಕೃತಿ ನಾಯಕ ಬಸವೇಶ್ವರರ 893ನೇ ಜಯಂತ್ಯೋತ್ಸವ”ವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಬಸವಣ್ಣನವರ ವಚನಗಳು ಕೇವಲ ಧಾರ್ಮಿಕ ಉಪದೇಶಗಳಲ್ಲ; ಅವು ಜೀವನಪಾಠಗಳಾಗಿವೆ. ‘ಕಾಯಕವೇ ಕೈಲಾಸ’ ಎಂಬ ಅವರ ಸಂದೇಶವು ಕೆಲಸದ ಗೌರವವನ್ನು ಎತ್ತಿಹಿಡಿಯುತ್ತದೆ. ಪ್ರತಿಯೊಬ್ಬರೂ ತಮ್ಮ ಪರಿಶ್ರಮದಿಂದ ಜೀವನ ನಡೆಸಬೇಕು ಮತ್ತು ಯಾವುದೇ ಕೆಲಸವನ್ನು ಹೀನ-ಶ್ರೇಷ್ಠತೆಗಳ ಅಳತೆಯಲ್ಲಿ ನೋಡುವುದನ್ನು ತೊರೆದು ಗೌರವದಿಂದ ಕಾಣಬೇಕು ಎಂದು ಅವರು ಹೇಳಿದರು. 

ಶಿಕ್ಷಣವೆಂಬುದು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗಿರದೆ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗಬೇಕು. ಆತ್ಮವಿಶ್ವಾಸ, ಶಿಸ್ತಿನ ಜೀವನ, ಪರಿಶ್ರಮ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಾವುದೇ ಗುರಿಯನ್ನು ಸಾಧಿಸಲು ಸಾಧ್ಯ. ಈ ಗುರಿ ಸಾಧನೆಗೆ ಮಹಿಳಾ ವಿವಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿರುವುದು ಸಂತಸದ ಸಂಗತಿ  ಎಂದು ಅವರು ಹರ್ಷ ವ್ಯಕ್ತಪಡಿಸಿದರು.  

ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾಗಿರುವ ವಿ.ಸಿ.ನಾಗಠಾಣ ಅವರು, ವಿದ್ಯಾರ್ಥಿನಿಯರು ಬಸವಣ್ಣರ ಆಚಾರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಸೇವೆ ಮಾಡುವ ಜೊತೆಗೆ ಅಕ್ಕಮಹಾದೇವಿಯ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.  

ಜಿಲ್ಲಾ ವೀರಶೈವ ಮಹಾಸಭಾದ ಗೌರವ ಅಧ್ಯಕ್ಷರಾಗಿರುವ ಡಾ.ಬನುದೇವಿ ಸಂಕಣ್ಣವರ ಅವರು, ವಿದ್ಯಾರ್ಥಿನಿಯರು ಬಸವಣ್ಣರವರ ವಚನಗಳಲ್ಲಿ ಬಿಂಬಿತವಾಗಿರುವ ಮಹಿಳಾ ಆದರ್ಶಗಳನ್ನು ತಿಳಿದುಕೊಳ್ಳುವ ಮೂಲಕ ವ್ಯಕ್ತಿಕ್ವವನ್ನು ರೂಪಿಸಿಕೊಂಡು ಆದರ್ಶ ಸಮಾಜದ ಸಂಸ್ಕೃತಿಯನ್ನು ಕಾಪಾಡಬೇಕೆಂದು ತಿಳಿಸಿದರು. 

ತರಬೇತಿನಿರತ ಐ.ಪಿ.ಎಸ್‌. ಅಧಿಕಾರಿಗಳಾದ ಕು.ಈಶಿತಾ ಗುಪ್ತಾರವರು, ವಿದ್ಯಾರ್ಥಿನಿಯರಿಗೆ ಭಾರತ ದೇಶ ಸುಂದರವಾಗಿದ್ದು, ಪ್ರತಿಯೊಬ್ಬರು ತಮ್ಮ ಸಾಮರ್ಥ್ಯಗಳನ್ನು ಬೆಳಸಿಕೊಂಡು ಉನ್ನತ ಹುದ್ದೆಗಳನ್ನು ಪಡೆಯಲು ಸಾಕಷ್ಟು ಅವಕಾಶಗಳು ಇದ್ದು, ಆದರೆ ವಿದ್ಯಾರ್ಥಿನಿಯರಲ್ಲಿ ಆತ್ಮ ವಿಶ್ವಾಸ ನಿರಂತರವಾದ ಅಭ್ಯಾಸ ಕಠಿಣ ಶ್ರಮದಿಂದ ಸಾಧ್ಯವೆಂದು ತಿಳಿಸಿಕೊಟ್ಟರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ಅವರು ಮಾತನಾಡಿ, “12ನೇ ಶತಮಾನದಲ್ಲಿ ಬಸವಣ್ಣನವರು ಬೋಧಿಸಿದ ತತ್ವಗಳು ಕಾಲಾತೀತವಾಗಿದ್ದು, ಇಂದಿನ ಸಮಾಜಕ್ಕೂ ದಿಕ್ಕು ತೋರಿಸುತ್ತಿವೆ. ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸಲು ಅವರ ಚಿಂತನೆಗಳು ಮಾರ್ಗದರ್ಶಕವಾಗಿವೆ” ಎಂದು ಹೇಳಿದರು. 

ಮಹಿಳಾ ಸಬಲೀಕರಣದ ದೃಷ್ಟಿಯಿಂದ ಬಸವಣ್ಣ ಮತ್ತು ಅಕ್ಕಮಹಾದೇವಿಯವರ ಚಿಂತನೆಗಳು ಅತ್ಯಂತ ಮಹತ್ವದ್ದಾಗಿವೆ. ಅಕ್ಕಮಹಾದೇವಿಯವರು ಧಾರ್ಮಿಕ ಹಾಗೂ ಸಾಮಾಜಿಕ ಕಟ್ಟಳೆಗಳನ್ನು ಪ್ರಶ್ನಿಸಿ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಆತ್ಮಗೌರವದ ಹಕ್ಕುಗಳನ್ನು ಒತ್ತಿ ಹೇಳಿದ್ದಾರೆ. ಇಂತಹ ಮಹಾನ್ ಚಿಂತನೆಗಳನ್ನು ಇಂದಿನ ವಿದ್ಯಾರ್ಥಿನಿಯರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. 

ಕುಲಸಚಿವರಾದ ಶಂಕರಗೌಡ ಎಸ್‌. ಸೋಮನಾಳ ಅವರು, ಬಸವಣ್ಣನವರ ಕುರಿತು ರಸಪ್ರಶ್ನೆ, ಚರ್ಚಾ ಸ್ಪರ್ಧೆ ಹಾಗೂ ವಚನ ವಾಚನ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಾದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು. 

ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್‌.ಲಕ್ಕಣ್ಣವರ, ಸಾಹಿತಿಗಳಾದ ಎಂ.ಜಿ.ಯಾದವಾಡ, ಕಾಶೀನಾಥ ಅಣ್ಣೇಪನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  

ಬಸವ ಅಧ್ಯಯನ ಪೀಠದ ಸಂಯೋಜಕ ಪ್ರೊ.ರಾಜಕುಮಾರ ಮಾಲಿಪಾಟೀಲ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಗವಿಸಿದ್ದಪ್ಪ ಆನಂದಳ್ಳಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ಕು. ನಂದಿನಿ ಪಾಟೀಲ ನಿರೂಪಿಸಿದರು. ವಂದನಾರೆ​‍್ಣಯನ್ನು ಕು. ಸೀಭಾ ನೆರವೇರಿಸಿದರು. ಪ್ರಾರ್ಥನಾ ಗೀತೆಯನ್ನು ಕು. ತೇಜಸ್ವಿನಿ ನಾಯಕ ಹಾಡಿದರು. ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.