ಬೆಂಗಳೂರು, ನ.15 : ಕ್ಯಾಬ್ ಚಾಲಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿ ಗೋಣಿಚೀಲದಲ್ಲಿ ಮೃತದೇಹವನ್ನು ಕಟ್ಟಿ ಎಸೆದಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಗ್ಗೆರೆಯ ರಾಜೀವ್ ಗಾಂಧಿ ನಗರದ ನಿವಾಸಿ ಸಂತೋಷ್ (30) ಹತ್ಯೆಯಾದವರು. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವರು ಕಳೆದ ವರ್ಷ ಯಮುನಾ ಎಂಬುವರನ್ನು ವಿವಾಹವಾಗಿದ್ದರು. ಸರಿಯಾಗಿ ಕೆಲಸಕ್ಕೆ ಹೋಗದೆ ತಂದೆ ಕಟ್ಟಿದ್ದ ಮನೆಯ ಬಾಡಿಗೆಯಲ್ಲೇ ಜೀವನ ಸಾಗಿಸುತ್ತಿದ್ದ ಸಂತೋಷ್ ದಿನನಿತ್ಯ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಇಬ್ಬರ ಕುಟುಂಬಗಳ ನಡುವೆಯೂ ಕಲಹ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತೋಷ್ ಅವರನ್ನು ಕಳೆದ ರಾತ್ರಿ ಮನೆಯಿಂದ ಹೊರಗೆ ಕರೆಸಿಕೊಂಡಿದ್ದ ದುಷ್ಕರ್ಮಿಗಳು ಕೊಲೆ ಮಾಡಿ ಗೋಣಿಚೀಲದಲ್ಲಿ ಮೃತದೇಹವನ್ನು ಕಟ್ಟಿ ಎಸೆದು ಹೋಗಿದ್ದಾರೆ. ಯಾವ ಕಾರಣಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ.
ನಂದಿನಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ತನಿಖೆ ಆರಂಭಿಸಿದ್ದಾರೆ.