ಕಲೆ-ಸಂಸ್ಕೃತಿಗೆ ಬಂಜಾರ ಸಮಾಜದ ಕೊಡುಗೆ ಅಪಾರ: ಡಾ. ಎಂ.ಬಿ. ಪಾಟೀಲ
Banjara society's contribution to art and culture is immense: Dr. M.B. Patil
ಲೋಕದರ್ಶನ ವರದಿ
ವಿಜಯಪುರ, ಫೆ.15 : ಬಸವಣ್ಣನವರ ಕಾಯಕ ತತ್ವದಂತೆ ಬಂಜಾರ ಸಮಾಜವು ಶ್ರಮ ಜೀವಿಗಳು, ಇವರು ಭವ್ಯವಾದ ಇತಿಹಾಸ ಹೊಂದಿದ್ದು, ಕಲೆ-ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅವರು ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂತ ಸೇವಾಲಾಲ್ ಅವರು ಸಮಾನತೆ, ಸೌಹಾರ್ದತೆ ಮತ್ತು ಶಿಸ್ತಿನ ಜೀವನದ ಮಹತ್ವವನ್ನು ಬೋಧಿಸಿದ ಮಹಾನ ವ್ಯಕ್ತಿ. ಪ್ರತೀ ತಾಂಡದಲ್ಲೂ ದುರ್ಗಾದೇವಿ ಹಾಗೂ ಸೇವಾಲಾಲ ದೇವಸ್ಥಾನಗಳನ್ನು ನಿರ್ಮಿಸಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಂಡಿರುವುದು ಬಂಜಾರ ಸಮುದಾಯದ ಆಧ್ಯಾತ್ಮಿಕ ಬಲದ ಸಂಕೇತವಾಗಿದೆ ಎಂದು ಹೇಳಿದರು.
ಸಾಂಪ್ರದಾಯಿಕ ಕಸೂತಿ ಕಲೆಯು ದೇಶ ವಿದೇಶಗಳಲ್ಲಿ ಪ್ರಸಿದ್ದಿಯಾಗಿದೆ. ಸಮುದಾಯದ ಉಡುಗೆ-ತೊಡಿಗೆ ಹಾಗೂ ಆಚರಣೆಗಳು ಬಹುವಿಶಿಷ್ಟ ಹಾಗೂ ವಿಭಿನ್ನವಾಗಿದ್ದು, ಸಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸಿ-ಬೆಳೆಸಿ ಕಾಪಾಡಿಕೊಂಡು ಬಂದಿದೆ. ಇಂತಹ ಸಾಂಸ್ಕೃತಿಕ ಪರಂಪರೆ- ಕಲೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಯಾವುದೇ ತಾಂಡಾವು ಹೊರಗುಳಿಯದಂತೆ ನೋಡಿಕೊಂಡು ಹಕ್ಕು ಪತ್ರ ವಿತರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು . ಮೌಢ್ಯತೆ ತೊಡೆದು ಹಾಕಿದ ಸಂತ ಸೇವಾಲಾಲ ಅವರ ವಿಚಾರ-ಧಾರೆಗಳನ್ನು ಅರಿಯುವ ಮೂಲಕ ಅವರು ಸಮಾಜ ಸುಧಾರಣೆಗೆ ನೀಡಿದ ಕೊಡುಗೆಯನ್ನು ಎಲ್ಲರೂ ಸ್ಮರಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕೌಶಲ್ಯಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯಕ ಅವರು, ಆಚರಣೆಗಳು ಕೇವಲ ಒಂದು ದಿನದ ಆಚರಣೆಯಾಗದೇ, ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅನುಸರಿಸುವ ನಿಟ್ಟಿನಲ್ಲಿ ಪ್ರೇರಣೆ ಹೊಂದಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಬೇಕು. ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಬೇಕು. ಬಂಜಾರ ಸಮಾಜದ ಮಹಿಳೆಯರ ಸಂಪ್ರದಾಯಬದ್ಧ ಉಡುಗೆಯಲ್ಲಿ ಅಡಕವಾಗಿರುವ ಕಲೆ ಮತ್ತು ಸಂಸ್ಕೃತಿ ವೈಭವವನ್ನು ಸಾರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾಧಿಕಾರಿಗಳಾದ ಆನಂದ.ಕೆ ಮಾತನಾಡಿ, ಸಂತ ಸೇವಾಲಾಲ್ ಅವರೋರ್ವ ದಾರ್ಶನಿಕರು ಅವರ ತತ್ವಾದರ್ಶ ಅವರು ನೀಡಿದ ಸಂದೇಶ ಸಮಾಜಕ್ಕೆ ದಾರದೀಪವಾಗಿದೆ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಉಪನ್ಯಾಸ ನೀಡಿದ, ನಾರಾಯಣ ಪವಾರ, ಸಂತ ಸೇವಾಲಾಲ ಜೀವನ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ಬಹು ವಿಸ್ತೃತವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಇಲಿಯಾಸ ಬೋರಾಮಣಿ, ಉಪಮಹಾಪೌರರಾದ ಸುಮಿತ್ರಾ ಜಾಧವ,ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಧನಸಿಂಗ್ ಮಹಾರಾಜ,ಮಹಾದೇವ ರಾಠೋಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ರಾಜಪಾಲ ಚವ್ಹಾಣ, ಕೇಸು ನಾಯಕ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಇದ್ದರು.
ಭವ್ಯ ಮೆರವಣಿಗೆ :
ಬೆಳಿಗ್ಗೆ ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ಸಂತ ಸೇವಾಲಾಲ್ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಭವ್ಯ ಮೆರವಣಿಗೆಯು ನಗರದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ. ಬಿ.ಆರ್ ಅಂಬೇಡ್ಕರ ವೃತ್ತ ಹಾಗೂ ಕನಕದಾಸ ವೃತ್ತದ ಮೂಲಕ ಸಾಗಿ ನಗರದ ಕಂದಗಲ್ ಹನುಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 