ಬೆಳೆ ವಿಮೆ, ಬರ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ

ಬೆಳೆ ವಿಮೆ, ಬರ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ BJP stages massive protest demanding crop insurance and drought relief

 ಸವದತ್ತಿ 21: ತಾಲೂಕಿನ ಸಾವಿರಾರು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಇದುವರೆಗೆ ಬೆಳೆ ವಿಮೆ ಪರಿಹಾರದ ಮೊತ್ತ ಜಮಾ ಆಗದಿರುವುದನ್ನು ಖಂಡಿಸಿ ಹಾಗೂ ಪ್ರಸಕ್ತ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸುವಂತೆ ಒತ್ತಾಯಿಸಿ, ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ಮಂಗಳವಾರದಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  ಸವದತ್ತಿ ನಗರದ ಬಿಜೆಪಿ ಮಂಡಲ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಅವರ ನೇತೃತ್ವದಲ್ಲಿ ಈ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.  

ನಗರದ ಮಾಮನಿ ಕಲ್ಯಾಣ ಮಂಟಪದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಸಾಗಿ ತಹಶೀಲ್ದಾರ್ ಕಚೇರಿಯನ್ನು ತಲುಪಿತು. ಪ್ರತಿಭಟನೆಯ ನಂತರ ತಾಲೂಕಾಡಳಿತದ ಪರವಾಗಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.  ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ, ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ತಾಲೂಕಿನ ಎಲ್ಲ ರೈತ ಬಾಂದವರು 2025-26 ನೇ ಸಾಲಿನ ತಮ್ಮ ಬೆಳೆಗಳಿಗೆ ವಿಮೆ ಕಂತು ಪಾವತಿಸಿದ್ದರೂ, ಇಂದಿನವರೆಗೂ ರೈತರಿಗೆ ಬೆಳೆ ವಿಮೆ ಪರಿಹಾರ ದೊರೆತಿಲ್ಲ. ಇದರಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ರೈತರ ಬೆಳೆ ವಿಮೆ ಪರಿಹಾರದ ಮೊತ್ತವನ್ನು ಅವರ ಖಾತೆಗಳಿಗೆ ಜಮೆ ಮಾಡಬೇಕು, ಎಂದು ಆಗ್ರಹಿಸಿದರು.  

 2026ರಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ರೈತರ ಬೆಳೆ ನಷ್ಟವಾಗಿದ್ದು, ತಾಲೂಕಿನಲ್ಲಿ ಬರಗಾಲದ ಛಾಯೆ ಆವರಿಸಿದೆ. ಆದ್ದರಿಂದ 2026ನೇ ಸಾಲಿಗೆ ಸವದತ್ತಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಅದಷ್ಟು ಬೇಗನೆ ಬರ ಪರಿಹಾರ ನೀಡಬೇಕು. ಸಂಕಷ್ಟದಲ್ಲಿರುವ ಜಿಲ್ಲೆಯ ಅನ್ನದಾತರಿಗೆ ಸೂಕ್ತ ಬೆಳೆ ನಷ್ಟ ಪರಿಹಾರ ಮತ್ತು ಅಗತ್ಯ ತುರ್ತು ನೆರವನ್ನು ಸರ್ಕಾರ ಒದಗಿಸಬೇಕು, ಎಂದು ಒತ್ತಾಯಿಸಿದರು.  ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಅವರು ಮನವಿ ಸ್ವೀಕರಿಸಿ ಮಾತನಾಡಿದರು. ಕೃಷಿ ಇಲಾಖೆಯ ಅಧಿಕಾರಿ ಶಿವಪ್ರಕಾಶ್ ಪಾಟೀಲ್, ಬಸವರಾಜ ಕಾರದಗಿ, ಸಂಜೀವಕುಮಾರ ನವಲಗುಂದ, ಜಗದೀಶ್ ಕೌಜಗೇರಿ, ಶ್ರೇಯಸ್ ಮಾಮನಿ, ಅರ್ಜುನ ಅಮೋಜಿ, ಮಲ್ಲಿಕಾರ್ಜುನ ಬೀಳಗಿ, ಪರಶುರಾಮ ಘಂಟಿ ಸೇರಿದಂತೆ ತಾಲೂಕಿನ ರೈತರು, ಸಾರ್ವಜನಿಕರು, ಭಾರತೀಯ ಜನತಾ ಪಾರ್ಟಿಯ ಎಲ್ಲಾ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.