ಸೆ. 4ರಂದು ಕೊಪ್ಪಳ ಜಿಲ್ಲೆಗೆ ಬಿಜೆಪಿ ಪಾದಯಾತ್ರೆ

ಸೆ. 4ರಂದು ಕೊಪ್ಪಳ ಜಿಲ್ಲೆಗೆ ಬಿಜೆಪಿ ಪಾದಯಾತ್ರೆ  BJP's padayatra to Koppal district on September 4


ಕೊಪ್ಪಳ  02: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದುರ್ಬಳಕೆಯಾಗಿರುವ ?187 ಕೋಟಿ ಹಣವನ್ನು ನಿಗಮದ ಖಾತೆಗೆ ಸಂಪೂರ್ಣವಾಗಿ ವಾಪಸ್ ಜಮಾ ಮಾಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳಗಣ್ಣವರ್ ಹೇಳಿದರು.  

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಲಿಂಗಸುಗೂರಿನಿಂದ ಬಳ್ಳಾರಿವರೆಗೆ 10 ದಿನಗಳ ಪಾದಯಾತ್ರೆ ಆರಂಭವಾಗಿದೆ ಎಂದರು.  

ಸೆಪ್ಟೆಂಬರ್ 4ರಿಂದ 6ರವರೆಗೆ ಪಾದಯಾತ್ರೆ ಕೊಪ್ಪಳ ಜಿಲ್ಲೆಯಲ್ಲಿ ಸಂಚರಿಸಲಿದ್ದು, ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ, ಗಂಗಾವತಿ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಸಾಗಲಿದೆ. ಬಳಿಕ ಕಂಪ್ಲಿ ಮಾರ್ಗವಾಗಿ ಬಳ್ಳಾರಿಗೆ ತೆರಳಲಿದೆ ಎಂದು ತಿಳಿಸಿದರು.  

ಪಾದಯಾತ್ರೆ ವೇಳೆ ವಿವಿಧೆಡೆ ಬಹಿರಂಗ ಸಭೆಗಳನ್ನು ನಡೆಸಿ, ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಜನರಿಗೆ ಮನವರಿಕೆ ಮಾಡಲಾಗುವುದು. ನಿಗಮದ ಹಣವನ್ನು ವಾಪಸ್ ಜಮಾ ಮಾಡುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗುವುದು ಎಂದರು.  

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪದಾಧಿಕಾರಿಗಳಾದ ಬಸವನಗೌಡ ಪಾಟೀಲ್, ವಿಜಯ್ ತಾಳಕೇರಿ, ಸುನಿಲ್ ಹೆಸರೂರು, ಸೋಮಶೇಖರ ಗೌಡ ಪಾಟೀಲ್, ಶಿವಪ್ಪ ವಾದಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.