ಕಬ್ಬು ಬೆಳೆಯಲ್ಲಿ ಸಮತೋಲನ ರಸಗೊಬ್ಬರಗಳ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ

ಕಬ್ಬು ಬೆಳೆಯಲ್ಲಿ ಸಮತೋಲನ ರಸಗೊಬ್ಬರಗಳ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ Awareness program on the use of balanced fertilizers in sugarcane cultivation

ಲೋಕದರ್ಶನ ವರದಿ 

ನೇಸರಗಿ 21: ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ಇನಾಮದಾರ ಶುಗರ್ಸ್‌, ಮರಕುಂಬಿ ವತಿಯಿಂದ “ಕಬ್ಬು ಬೆಳೆಯಲ್ಲಿ ಸಮತೋಲನ ರಸಗೊಬ್ಬರಗಳ ಬಳಕೆ ಮತ್ತು ಇತರೆ ಕೃಷಿ ಸಾಮಗ್ರಿಗಳ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಕೆಎಲ್‌ಇ ಸಂಸ್ಥೆ, ಬೆಳಗಾವಿ ಮತ್ತು  ಮರಕುಂಬಿ ಇನಾಮದಾರ ಶುಗರ್ಸ್‌ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ವಿಜಯ ಮೆಟಗುಡ್ಡ ಭಾಗವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಆರಂಭಗೊಳ್ಳಲಿರುವ ಕಬ್ಬಿನ ರವದೆ, ಹತ್ತಿ ಬೆಳೆಯ ಕಟ್ಟಿಗೆ ಮತ್ತು ಗೋವಿನ ಜೋಳದ ದಿಂಡು ಉಪಯೋಗಿಸಿ ಬಯೋಚಾರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದ್ದು, ಈ ಭಾಗದ ರೈತರಿಗೆ ಬಯೋಚಾರ್ ಬಳಸಿ ಕಬ್ಬಿನ ಬೆಳೆಯ ಇಳುವರಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಮತ್ತು ಕಬ್ಬು ಕಟಾವಿನ ನಂತರ ಉಳಿದ ರವದೆಯನ್ನು ಬಯೋಚಾರ್ ತಯಾರಿಕೆಗೆ ಬಳಸುವುದರಿಂದ ರೈತರಿಗೆ ಹೆಚ್ಚುವರಿ ಆದಾಯ ದೊರೆಯುವ ಸಾಧ್ಯತೆಯಿದೆ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಮಾತನಾಡಿ, ಕಬ್ಬು ಬೆಳೆಯಲ್ಲಿ ಸಮತೋಲಿತ ಪ್ರಮಾಣದಲ್ಲಿ ರಸಗೊಬ್ಬರ ಹಾಗೂ ಇತರೆ ಕೃಷಿ ಕೃಷಿ ಸಾಮಗ್ರಿಗಳನ್ನು ಬಳಸುವುದರಿಂದ ಕಬ್ಬಿನ ಉತ್ಪಾದನೆ ಹೆಚ್ಚುವುದರ ಜೊತೆಗೆ ಮಣ್ಣಿನ ಫಲವತ್ತತೆ ಸುಧಾರಿಸುತ್ತದೆ ಹಾಗೂ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.  ಜೊತೆಗೆ, ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ಈ ಭಾಗದ ರೈತರಿಗಾಗಿ ಕಬ್ಬಿನ ಸಸಿಗಳನ್ನು ಉತ್ಪಾದಿಸಲಾಗುತ್ತಿದ್ದು ಮತ್ತು ಕಬ್ಬಿನ ಬೆಳೆಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟನಾಶಕವನ್ನು ಉತ್ಪಾದಿಸಲಾಗುತತಿದ್ದು, ಕಬ್ಬು ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ಮುಖ್ಯಸ್ಥರಾದ  ಶೇಗುಣಸಿಯವರು ಉಪಸ್ಥಿತರಿದ್ದರು.  ಸುತ್ತಮುತ್ತಲಿನ ಹಳ್ಳಿಗಳ 200 ರೈತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.