ತಾಳಿಕೋಟಿ 28: ಮುದ್ದೇಬಿಹಾಳ ತಾಲೂಕಿನಾದ್ಯಂತ ಟ್ರ್ಯಾಕ್ಟರ್ ಚಾಲಕರು ಕಬ್ಬು ಬೆಳೆಗಾರರಿಂದ ತಮ್ಮ ವಾಹನಗಳಿಗೆ ಕಬ್ಬು ಹೇರಿಕೊಂಡು ರಾತ್ರಿ ಸಮಯದಲ್ಲಿ ಸಂಚರಿಸುವಾಗ ಅಪಘಾತಗಳನ್ನು ತಪ್ಪಿಸಲು ಕೆಲವು ಅಗತ್ಯ ನಿಯಮಗಳನ್ನು ಪಾಲಿಸಬೇಕೆಂದು ಬ. ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಚಾಲಕರಿಗೆ ತಿಳಿಸಿದರು.
ಬುಧವಾರ ಸಮೀಪದ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಆಯೋಜಿಸಿದ ಟ್ರ್ಯಕ್ಟರ್ ಚಾಲಕರ ಜಾಗೃತಿ ಸಭೆಯಲ್ಲಿ ಕೆಂಪು ಬಣ್ಣದ ರೇಡಿಯಮ್ಸ್ ಸ್ಟಿಕರ್ಸ್ ಗಳನ್ನು ವಿತರಿಸಿ ಅವರು ಮಾತನಾಡಿದರು. ಟ್ರ್ಯಕ್ಟರ್ ಚಾಲಕರು ರಾತ್ರಿ ವೇಳೆಯಲ್ಲಿ ವಾಹನದಲ್ಲಿ ಕಬ್ಬು ತೆಗೆದುಕೊಂಡು ಹೋಗುವಾಗ ಹಿಂಬದಿಯಲ್ಲಿ ವಾಹನಕ್ಕೆ ಕೆಂಪು ಬಣ್ಣದ ರೇಡಿಯಮ್ ಸ್ಟಿಕರ್ ಕಡ್ಡಾಯವಾಗಿ ಬಳಸಬೇಕು ಇದರಿಂದ ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದ ಅವರು ವಾಹನ ಚಾಲಕರು ಯಾವ ಕಾರಣಕ್ಕೂ ನಿರ್ಲಕ್ಷೆ ತೋರಬಾರದು ಎಂದರು. ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಮಾತನಾಡಿ ಕಳೆದ ವರ್ಷದಲ್ಲಿ ಏಳು ಅಪಘಾತದ ಘಟನೆಗಳು ಸಂಭವಿಸಿವೆ ಇದರಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದರು, ಇಂಥಹ ಘಟನೆಗಳು ಯಾವ ಕಾರಣಕ್ಕೂ ಮರುಕಳಿಸಬಾರದು ಎಂಬುದು ನಮ್ಮ ಇಲಾಖೆಯ ಆಶಯವಾಗಿದೆ, ಆದ್ದರಿಂದ ನಾವು ಇಂದು ತಮಗೆ ಅರಿವು ಮೂಡಿಸುವುದರ ಜೊತೆಗೆ ರೇಡಿಯಂ ಸ್ಟಿಕರ್ಸ್ ಗಳನ್ನು ವಿತರಿಸುತಿದ್ದೇವೆ ಇವಳನ್ನು ಕಡ್ಡಾಯವಾಗಿ ಹಿಂಬದಿಯಲ್ಲಿ ಬಳಸಿ ಸುರಕ್ಷತೆ ಕಾಪಾಡಿಕೊಳ್ಳಿ ಎಂದರು.
ಸಭೆಯಲ್ಲಿ ಮುದ್ದೇಬಿಹಾಳ ಪಿಎಸ್ಐ ಸಂಜಯ ತಿಪ್ಪಾರೆಡ್ಡಿ, ತಾಳಿಕೋಟಿ ಪಿಎಸ್ಐ ರಾಮನಗೌಡ ಸಂಕನಾಳ, ಬಾಲಾಜಿ ಶುಗರ್ಸ್ ಫ್ಯಾಕ್ಟರಿಯ ಮುಖ್ಯಸ್ಥರು, ವಾಹನಗಳ ಚಾಲಕರು ಇದ್ದರು.