ಅಥಣಿ: ಸಚಿವಾಕಾಂಕ್ಷಿಗಳಿಗೆ ಸಿಹಿ ಸುದ್ದಿ; ಸಂಪುಟ ವಿಸ್ತರಣೆಗೆ ಕಾಂಗ್ರೆಸ್ನಲ್ಲಿ ಚಟುವಟಿಕೆ ಚುರುಕು

ಅಥಣಿ: ಸಚಿವಾಕಾಂಕ್ಷಿಗಳಿಗೆ ಸಿಹಿ ಸುದ್ದಿ; ಸಂಪುಟ ವಿಸ್ತರಣೆಗೆ ಕಾಂಗ್ರೆಸ್ನಲ್ಲಿ ಚಟುವಟಿಕೆ ಚುರುಕು  Athani: Good news for ministerial aspirants; activity intensifies within the Congress regarding cabi

ಅಥಣಿ 31: ಒಂದು ತಿಂಗಳಿನಿಂದ ಸಚಿವ ಸ್ಥಾನಕ್ಕಾಗಿ ಕಾದು ಕುಳಿತಿರುವ ಆಕಾಂಕ್ಷಿಗಳಿಗೆ ಆಷಾಢ ಸೋಮವಾರದಂದು ಶುಭ ಸುದ್ದಿ ಸಿಗುವ ನೀರೀಕ್ಷೆ ಮೂಡಿದೆ. ಸಂಪುಟ ವಿಸ್ತರಣೆ ಕುರಿತು ಗುರುವಾರ ಸಂಜೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಸೋಮವಾರದೊಳಗೆ ವಿಸ್ತರಣೆ ಮಾಡುವ ಬಗ್ಗೆ ಹಸಿರು ಸಂಕೇತ ದೊರೆತಿದೆ ಎನ್ನಲಾಗಿದೆ.  

ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.  

ಕಳೆದ ಒಂದು ತಿಂಗಳಿಂದ ಸಚಿವ ಸ್ಥಾನಕ್ಕಾಗಿ ಕಾದಿದ್ದ ಶಾಸಕರು ತಮ್ಮ ಹಿರಿಯತನ, ಧರ್ಮ, ಜಾತಿ ಹಾಗೂ ಜಿಲ್ಲಾವಾರು ಪ್ರಾತಿನಿಧ್ಯದ ಆಧಾರದ ಮೇಲೆ ಸಚಿವ ಸ್ಥಾನ ಪಡೆಯುವ ನೀರೀಕ್ಷೆಯಲ್ಲಿದ್ದರು. ಆದರೆ ಸಂಪುಟ ವಿಸ್ತರಣೆ ದಿನಾಂಕ ನಿಗದಿಯಾಗದೇ ಇದ್ದ ಕಾರಣ ಆಕಾಂಕ್ಷಿಗಳಲ್ಲಿ ಗೊಂದಲ ಉಂಟಾಗಿತ್ತು.  

ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಸಚಿವರಾಗಬಹುದು ಎಂಬ ನೀರೀಕ್ಷೆಯಲ್ಲಿದ್ದ ಕೆಲ ಶಾಸಕರಿಗೂ ಇದೀಗ ಸ್ಪಷ್ಟತೆ ದೊರೆಯುವ ಸಾಧ್ಯತೆ ಇದೆ. ಜುಲೈ 14ರಂದು ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಮರಳಿದ ಬಳಿಕ ಸಂಪುಟ ವಿಸ್ತರಣೆ ಅಂತಿಮ ಹಂತ ತಲುಪಲಿದೆ ಎಂದು ನೀರೀಕ್ಷಿಸಲಾಗಿತ್ತು. ಆದರೆ ಜುಲೈ 30ರವರೆಗೂ ಯಾವುದೇ ಬೆಳವಣಿಗೆ ಕಂಡುಬಂದಿರಲಿಲ್ಲ.  

ಜಾತಿ, ಧರ್ಮ, ಹಿರಿಯತನ ಹಾಗೂ ಜಿಲ್ಲಾವಾರು ಸಮತೋಲನದ ಆಧಾರದ ಮೇಲೆ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಸಿದ್ಧಪಡಿಸಿರುವ ಸಂಭಾವ್ಯ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಅನುಮೋದನೆ ನೀಡಿದೆ ಎನ್ನಲಾಗಿದೆ. ಪ್ರಮಾಣ ವಚನ ಕಾರ್ಯಕ್ರಮದ ದಿನಾಂಕ ಇನ್ನೂ ಅಂತಿಮವಾಗಿಲ್ಲವಾದರೂ, ಪಟ್ಟಿಯ ಅಂತಿಮ ರೂಪು ಸಿದ್ಧವಾಗಿದೆ ಎಂದು ತಿಳಿದುಬಂದಿದೆ.  

ಬೆಳಗಾವಿ ಜಿಲ್ಲೆಯ ಇನ್ನಿಬ್ಬರು ಶಾಸಕರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ. ಈ ಪೈಕಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ. ಮಹಿಳಾ ಕೋಟಾದಡಿ ಬೆಳಗಾವಿ ಗ್ರಾಮೀಣ ಶಾಸಕಿ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರೂ ಮತ್ತೊಮ್ಮೆ ಚರ್ಚೆಯಲ್ಲಿದೆ.  ಸಂಪುಟ ವಿಸ್ತರಣೆ ಕುರಿತ ಅಧಿಕೃತ ಘೋಷಣೆಗಾಗಿ ಸಚಿವಾಕಾಂಕ್ಷಿಗಳು ಕಾತರದಿಂದ ಕಾಯುತ್ತಿದ್ದಾರೆ.