ಭಗತ್ ಸಿಂಗ್ ರ ಆಶಯದಂತೆ ಜನ ಸಾಮಾನ್ಯರು ಹೋರಾಟದ ರಾಜಕೀಯ ಮಾಡಬೇಕು - ರಾಮಾಂಜನಪ್ಪ ಆಲ್ದಳ್ಳಿ

ಭಗತ್ ಸಿಂಗ್ ರ ಆಶಯದಂತೆ ಜನ ಸಾಮಾನ್ಯರು ಹೋರಾಟದ ರಾಜಕೀಯ ಮಾಡಬೇಕು - ರಾಮಾಂಜನಪ್ಪ ಆಲ್ದಳ್ಳಿ As per Bhagat Singh's wish, common people should do politics of struggle - Ramanjanappa Aldalli

ಭಗತ್ ಸಿಂಗ್ ರ ಆಶಯದಂತೆ ಜನ ಸಾಮಾನ್ಯರು ಹೋರಾಟದ ರಾಜಕೀಯ ಮಾಡಬೇಕು - ರಾಮಾಂಜನಪ್ಪ ಆಲ್ದಳ್ಳಿ 

               ಕೋಪ್ಪಳ 21: ಉಳೇನೂರು ಗ್ರಾಮದಲ್ಲಿ ಎಐಡಿಎಸ್‌ಓ, ಎಐಡಿವೈಓ, ಎಐಎಂಎಸ್‌ಎಸ್ ಮತ್ತು ಎಐಕೆಕೆಎಂಎಸ್ ಸಂಘಟನೆಗಳ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರರಾದ ಶ್ರೀ ರಾಮಾಂಜನಪ್ಪ ಆಲ್ದಳ್ಳಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ "ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾಯಿತು. ಇಂದಿಗೂ ಜನತೆ ಜಾತಿ, ಧರ್ಮ ಮತ್ತು ಭಾಷೆಗಳ ಹೆಸರಿನಲ್ಲಿ ಕಚ್ಚಾಡುವುದನ್ನು ನೋಡುತ್ತಿದ್ದೇವೆ. ಏಕೆಂದರೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಬಲ್ಯ ಹೊಂದಿದ್ದ ಪಂಥ ಇಂತಹ ಸಮಸ್ಯೆಗಳ ವಿರುದ್ಧ ರಾಜಿರಹಿತ ಹೋರಾಟವನ್ನು ಹರಿಬಿಡಲಿಲ್ಲ. ಅದರ ಪರಿಣಾಮವೇ ಇಂದು ನಾವು ಅನುಭವಿಸುತ್ತಿದ್ದೇವೆ.  

        ಭಗತ್ ಸಿಂಗ್ ಇದನ್ನು ಅಂದೇ ಗ್ರಹಿಸಿದ್ದರು. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ದೌರ್ಜನ್ಯಗಳು, ನಿರುದ್ಯೋಗ ಸಮಸ್ಯೆ, ಶಿಕ್ಷಣ ಮತ್ತು ಆರೋಗ್ಯದ ವ್ಯಾಪಾರಿಕರಣ, ರೈತರ ಆತ್ಮಹತ್ಯೆಗಳು ಇಂತಹ ಹಲವಾರು ಸಮಸ್ಯೆಗಳು ಜನತೆಯ ಜೀವನವನ್ನು ನರಕ ಸದೃಶಗೊಳಿಸುತ್ತಿವೆ. ಜೊತೆಗೆ ಸಾಂಸ್ಕೃತಿಕ ಅಧ:ಪತನದಿಂದಾಗಿ ನೀತಿ - ನೈತಿಕತೆ, ಮೌಲ್ಯಗಳು ಕುಸಿಯುತ್ತಿದ್ದು ಸ್ವಾರ್ಥ, ಸ್ವಕೇಂದ್ರಿಯತೆ ಹೆಚ್ಚಾಗುತ್ತದೆ. ಹಾಗಾಗಿ ವಿದ್ಯಾವಂತ ಯುವ ಜನತೆ ತಮ್ಮ ತಂದೆ ತಾಯಂದಿರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು, ಬೀದಿಗಳಲ್ಲಿ ಅನಾಥರಾಗಿ ಬಿಟ್ಟು ಹೋಗುವುದನ್ನು ನೋಡುತ್ತಿದ್ದೇವೆ. ಇದು ಅತ್ಯಂತ ನೋವಿನ ವಿಷಯ. ಜೊತೆಗೆ ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಅವ್ಯಾಹತವಾಗಿ ಪ್ರಸಾರವಾಗುತ್ತಿರುವ ಅಶ್ಲೀಲ ಸಿನಿಮಾ - ಸಾಹಿತ್ಯ, ಜಾಹೀರಾತುಗಳು ಆನ್ಲೈನ್ ಗೇಮ್ ಗಳಿಗೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ದಾಸರಾಗುತ್ತಿದ್ದಾರೆ.  

        ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿ - ಯುವಕರನ್ನು ಆ ದಾಸತ್ವದಿಂದ ಹೊರತರಲು ಭಗತ್ ಸಿಂಗ್ ರ ಆದರ್ಶಗಳು ಅತ್ಯವಶ್ಯಕ. ಇಲ್ಲಿ ಪ್ರಜ್ಞಾವಂತ ಜನತೆ, ಹಿರಿಯರು ಅತ್ಯಂತ ಜಾಗರೂಕತೆಯಿಂದ ಇಂದಿನ ಪೀಳಿಗೆಯನ್ನು ಉಳಿಸಿಕೊಳ್ಳಬೇಕಾಗಿದೆ. ಭಗತ್ ಸಿಂಗ್ ರವರ ಆಶಯದಂತೆ ಜನತೆ ಹೋರಾಟದ ರಾಜಕೀಯವನ್ನು ಎತ್ತಿ ಹಿಡಿಯಬೇಕಾಗಿದೆ. ಅವರ ಕನಸಿನ ಸಮಾಜವಾದಿ ಸಮಾಜವನ್ನು ತರುವುದರ ಮೂಲಕ ಎಲ್ಲಾ ಜನತೆ ಘನತೆ, ಗೌರವ, ನೆಮ್ಮದಿಯಿಂದ ಬದುಕುವಂತಾಗಬೇಕು. ಆಗ ಮಾತ್ರ ನಾವು ಭಗತ್ ಸಿಂಗ್ ರವರಿಗೆ ನಿಜವಾದ ಗೌರವವನ್ನು ಸಲ್ಲಿಸಿದಂತಾಗುತ್ತದೆ.  

          ಈ ನಿಟ್ಟಿನಲ್ಲಿ ಜನತೆ ಯೋಚಿಸಬೇಕು, ಕಾರ್ಯಗತಗೊಳ್ಳಬೇಕು ಎಂದು ಕರೆ ನೀಡಿದರು.  ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ರಾಜ್ಯ ಮುಖಂಡರುಗಳಾದ ಮಹಾಂತೇಶ್, ಗೋವಿಂದ್, ವಿಜಯಲಕ್ಷ್ಮಿ, ಶರಣು ಪಾಟೀಲ್ ಹಾಗೂ ಊರಿನ ಹಿರಿಯರಾದ ಸೋಮಲಿಂಗಪ್ಪ, ಹೊನ್ನುರ​‍್ಪ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಂಘಟನೆಗಳ ಸದಸ್ಯರಾದ ಶಾರದಾ, ಸಿಂಧು, ಯರಿಸ್ವಾಮಿ, ಗಂಗರಾಜ ಅಳ್ಳಳ್ಳಿ, ದೊಡ್ಡಬಸವ, ಶಿವಪ್ಪ, ದೇವರಾಜ, ಅಂಜಿನಪ್ಪ, ಬಸವರಾಜಪ್ಪ ಸೇರಿದಂತೆ ಊರಿನ ಎಲ್ಲಾ ವಿದ್ಯಾರ್ಥಿ ಯುವಕರು, ಮಹಿಳೆಯರು ಮತ್ತು ರೈತ ಕಾರ್ಮಿಕರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಊರಿನ ಶಾಲಾ ಮಕ್ಕಳು ಭಗತ್ ಸಿಂಗ್ ರವರ ಕುರಿತಾದ ನೃತ್ಯಗಳನ್ನು ಮತ್ತು ಕ್ರಾಂತಿಕಾರಿ ಗೀತೆಗಳನ್ನು ಹಾಡಿದರು. ಸುದ್ದಿ ಇವರಿಂದ,ಗಂಗರಾಜ ಅಳ್ಳಳ್ಳಿ ಜಿಲ್ಲಾ ಸಂಚಾಲಕರುಎಐಡಿಎಸ್‌ಓ ಕೊಪ್ಪಳ.