ಮಾಸ್ಕೋ, ಜ 29 : ಕೊರೋನಾವೈರಾಣು ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಆ್ಯಪಲ್ ಕಂಪನಿ ತಮ್ಮ ಸಿಬ್ಬಂದಿಗಳ ಚೀನಾ ಪ್ರವಾಸಗಳ ಮೇಲೆ ನಿರ್ಬಂಧ ಹೇರಿದೆ.
ಸಿಎನ್ ಬಿಸಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಆಪಲ್ ಸಿಇಒ ಟಿಮ್ ಕ್ರೂಕ್, ಚೀನಾದ ವ್ಯಾವಹಾರಿಕ ಪ್ರವಾಸಗಳನ್ನು ರದ್ದುಗೊಳಿಸಲಾಗಿದೆ. ಕೊರೋನಾ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿರುವ ಚೀನಾದ ವುಹಾನ್ ನಗರದಲ್ಲಿನ ಉದ್ಯೋಗಿಗಳಿಗೆ ಸುರಕ್ಷತಾ ಕಿಟ್ ಗಳನ್ನು ಒದಗಿಸಲಾಗುತ್ತಿದೆ ಎಂದಿದ್ದಾರೆ.
ಚೀನಾ ಸರ್ಕಾರದ ಸಲಹೆ ಮೇರೆಗೆ ವುಹಾನ್ ಹಾಗೂಇತರ ಭಾಗಗಳಲ್ಲಿನ ಕಂಪನಿಯ ಶಾಖೆಗಳನ್ನು ಫೆ. 10ರವರೆಗೆ ಮುಚ್ಚಲಾಗಿದೆ. ಕಂಪನಿಯ ಬಹುತೇಕ ಉತ್ಪಾದನಾ ಸೌಲಭ್ಯಗಳು ಚೀನಾದಲ್ಲಿರುವುದರಿಂದ ಅದು ವ್ಯಾಪಾರದ ಮೇಲೂ ಪರಿಣಾಮ ಬೀರಲಿದೆ ಎಂದಿದ್ದಾರೆ.
ಡಿಸೆಂಬರ್ ನಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ವೈರಾಣು ಇಲ್ಲಿಯವರೆಗೆ 130 ಜನರನ್ನು ಬಲಿತೆಗೆದುಕೊಂಡಿದೆ. ಸುಮಾರು 6000 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.
ಚೀನಾದ ಜೊತೆಗೆ ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಜಪಾನ್, ಮಲೇಶಿಯಾ, ನೇಪಾಳ, ಸಿಂಗಾಪುರ, ದಕ್ಷಿಣ ಕೊರಿಯಾ, ಥಾಯ್ಲೆಂಡ್, ಅಮೆರಿಕ, ವಿಯೆಟ್ನಾಂ, ಥೈವಾನ್, ಶ್ರೀಲಂಕಾ ಮತ್ತು ಕಾಂಬೋಡಿಯ ದೇಶಗಳಲ್ಲೂ ಸೋಂಕುಗಳು ದೃಢಪಟ್ಟಿರುವುದು ವರದಿಯಾಗಿದೆ.