ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಬೆಳೆಸುವ ಸಂಕಲ್ಪ ಕಾರ್ಯಕ್ರಮ

 ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಬೆಳೆಸುವ ಸಂಕಲ್ಪ ಕಾರ್ಯಕ್ರಮ  An initiative to foster health awareness among students

ಲೋಕದರ್ಶನ ವರದಿ 

ಯರಗಟ್ಟಿ 25: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂಪಿಸಲಾದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಇದರ ಯಶಸ್ವಿ ಅನುಷ್ಠಾನಕ್ಕಾಗಿ ವ್ಯಾಪಕ ಜಾಗೃತಿ ಮತ್ತು ಅನುಸರಣೆ ಕಾರ್ಯ ನಡೆಯುತ್ತಿದೆ ಎಂದು ಯೋಜನೆಯ ಯರಗಟ್ಟಿ ತಾಲೂಕು ಕೃಷಿ ಅಧಿಕಾರಿ ಬಸವರಾಜ ಶಿಗ್ಗಾಂವಿ ಹೇಳಿದರು.  

ಸಮೀಪದ ತಳ್ಳೂರು ಗ್ರಾಮದ ಬಸವೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕುಟುಂಬದ ಅಮೂಲ್ಯ ಸಂಪತ್ತಾಗಿದ್ದು, ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.  

ಇಂದಿನ ದಿನಗಳಲ್ಲಿ ಮದ್ಯವ್ಯಸನ, ಗುಟ್ಕಾ, ಧೂಮಪಾನ ಸೇರಿದಂತೆ ವಿವಿಧ ದುಶ್ಚಟಗಳಿಂದ ಯುವಜನತೆ ಹಾನಿಗೊಳಗಾಗುತ್ತಿದೆ. ಕೆಟ್ಟ ಸಹವಾಸ ಹಾಗೂ ಕ್ಷಣಿಕ ಆಕರ್ಷಣೆಯಿಂದ ಆರಂಭವಾಗುವ ದುಶ್ಚಟಗಳು ವ್ಯಕ್ತಿಯ ಬದುಕಿನ ಜೊತೆಗೆ ಸಮಾಜದ ಆರೋಗ್ಯಕ್ಕೂ ಧಕ್ಕೆ ಉಂಟುಮಾಡುತ್ತವೆ ಎಂದು ಎಚ್ಚರಿಸಿದರು.  

ವಿದ್ಯಾರ್ಥಿ ಜೀವನದಲ್ಲಿಯೇ ಆರೋಗ್ಯಕರ ಜೀವನಶೈಲಿ, ಶಿಸ್ತು ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಅವರು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎಂ.ಎಚ್‌. ದುಂಡನಕೊಪ್ಪ, ಎ.ಜೆ. ಕಾಂಬಳೆ, ಎಸ್‌.ಎಫ್‌. ಬಡಿಗೇರ, ಜೆ.ಎ. ಕೊಟ್ರಶೆಟ್ಟಿ, ಎಲ್‌.ವಿ. ಪಾಟೀಲ, ಬಿ.ಸಿ. ಸುಣದೊಳಿ, ಎ.ಎಚ್‌. ಕುದರಿ ಹಾಗೂ ಸೇವಾನಿರತರು ಮತ್ತು ಪ್ರಗತಿ ಬಂಧು ತಂಡದ ಸದಸ್ಯರು ಉಪಸ್ಥಿತರಿದ್ದರು.