ಇ-ಸಿ ಪತ್ರ ನೀಡಿಕೆಯಲ್ಲಿ ಹಣ ವಸೂಲಿ ಆರೋಪ: ಕ್ರಮಕ್ಕೆ ಆಗ್ರಹ

ಇ-ಸಿ ಪತ್ರ ನೀಡಿಕೆಯಲ್ಲಿ ಹಣ ವಸೂಲಿ ಆರೋಪ: ಕ್ರಮಕ್ಕೆ ಆಗ್ರಹ  Allegations of money collection for issuing e-C certificates: Demand for action

ಗದಗ  24 :   ಗಜೇಂದ್ರಗಡ ಉಪ ನೋಂದಣಿ ಇಲಾಖೆಯಲ್ಲಿ ಇ-ಸಿ ಪತ್ರ ನೀಡಲು ಸಾರ್ವಜನಿಕರಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಪ್ರಶ್ನಿಸಿದ ಕಾರಣಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದಂಪತಿ ಆರೋಪಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ದಂಪತಿ ಮಾತನಾಡಿ, ಕಳೆದ ಜೂನ್ 22ರಂದು ಮಧ್ಯಾಹ್ನ ಪುರಸಭೆ ಎದುರು ಈ ವಿಷಯವಾಗಿ ಪ್ರಶ್ನೆ ಮಾಡಿದಾಗ ಏಕಾಏಕಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಕುತ್ತಿಗೆ ಹಿಡಿದು ನೆಲಕ್ಕೆ ಕೆಡವಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದರು.  

ಈ ಕುರಿತು ಈಗಾಗಲೇ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕಾರಣವಿಲ್ಲದೆ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ, ದೈಹಿಕ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.  ಆರೋಪಿಗಳ ವಿರುದ್ಧ ಒಂದು ವಾರದೊಳಗೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಗಜೇಂದ್ರಗಡ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೆಆರ್‌ಎಸ್ ಪಕ್ಷದ ಎ.ಕೆ. ಹೊಸಂಗಡಿ ಎಚ್ಚರಿಕೆ ನೀಡಿದರು.  ಸುದ್ದಿಗೋಷ್ಠಿಯಲ್ಲಿ ಫಾರೂಕ್ ಕಟ್ಟಿ ಮನಿ, ಶ್ರೀಮತಿ ಕಾವ್ಯಾ ವಿನಾಯಕ ಹಿಟ್ಟನಳ್ಳಿ ಉಪಸ್ಥಿತರಿದ್ದರು.